ಸುದ್ದಿ360 ಶಿವಮೊಗ್ಗ, ಸೆ.07 : ಬದುಕಿನಲ್ಲಿ ಸಂಸ್ಕಾರವೆಂಬುದು ಅತಿಮುಖ್ಯವಾಗಿದ್ದು ಗೆದ್ದಾಗ ಚಪ್ಪಾಳೆ ತಟ್ಟುವ ಕೈಗಳಿಗಿಂತ ಸೋತಾಗ ಮೇಲೆತ್ತುವ ಕೈಗಳು ನೀವಾಗಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.
ಅವರು ಇಂದು ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಮಹಿಳಾ ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬಲ್ಲ ಆತ್ಮವಿಶ್ವಾಸವನ್ನು ಕ್ರೀಡೆ ನೀಡಲಿದೆ. ಸ್ಫರ್ಧೆಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿ. ಅಂಜಿಕೆಯಿಂದಾಗುವ ಹಿಂಜರಿಕೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೋಲಿನ ನೋವು ಮನಸ್ಸಿಗೆ ಇಳಿದರೇ ಅಥವಾ ಗೆಲುವು ಅಹಂಕರವಾಗಿ ರೂಪಗೊಂಡರೇ ಅದು ಮನುಷ್ಯನ ಅಧೋಗತಿಗೆ ಕಾರಣವಾಗುತ್ತದೆ. ಹಾಗಾಗಿಯೇ ಸಮಾನವಾಗಿ ಎದುರಿಸುವ ಮನೋಸ್ಥೈರ್ಯ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕ್ರೀಡಾ ನಿರ್ದೇಶಕರಾದ ಡಾ.ಖಾಲೀದ್ ಖಾನ್, ಸಿ.ಬಿ.ಆರ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಸ್.ಕಾಂತರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಸುಮಾರು 16 ಕ್ಕು ಹೆಚ್ಚು ವಿದ್ಯಾರ್ಥಿಗಳ ತಂಡಗಳು ಥ್ರೋ ಬಾಲ್ ಮತ್ತು ಟೆನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.