ಸುದ್ದಿ360, ದಾವಣಗೆರೆ, ಜು.12: ನಗರದ ಹೊರವಲಯದ ಗ್ರಾಮಗಳಲ್ಲಿ ಭತ್ತದ ಸಸಿ ಮಡಿ ಮತ್ತಿತರ ಬೆಳೆಗಳ ಮೇಲೆ ಹಂದಿಗಳು ದಾಳಿ ಮಾಡಿ ಹಾನಿ ಮಾಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಹಿಸಾನ್ ಸಭಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ದೊಡ್ಡ ಬೂದಿಹಾಳ್, ಚಿಕ್ಕ ಬೂದಿಹಾಳ್ ಹಾಗೂ ಯರಗುಂಟೆ ಗ್ರಾಮಗಳಲ್ಲಿ ರೈತರ ವಿವಿಧ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಹಂದಿಗಳ ಕಾಟ ತಡೆಯುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು, ನಗರದಲ್ಲಿದ್ದ ಹಂದಿಗಳೆಲ್ಲಾ ಈಗ ಹೊರ ವಲಯದ ಹಳ್ಳಿಗಳತ್ತ ಮುಖ ಮಾಡಿವೆ. ಮುಖ್ಯವಾಗಿ ದೊಡ್ಡ ಬೂದಿಹಾಳ್, ಚಿಕ್ಕ ಬೂದಿಹಾಳ್ ಹಾಗೂ ಯರಗುಂಟೆ ಗ್ರಾಮಗಳಲ್ಲಿ ಭತ್ತದ ಸಸಿ ಮಡಿ ಮತ್ತಿತರ ಬೆಳೆಗಳ ಮೇಲೆ ಹಂದಿಗಳು ದಾಳಿ ಮಾಡಿ ಹಾನಿ ಮಾಡುತ್ತಿವೆ ಎಂದು ದೂರಿದರು.
ಚಿಕ್ಕ ಬೂದಿಹಾಳ ಗ್ರಾಮದಲ್ಲಿ ಇತ್ತೀಚೆಗೆ ರೈತರೊಬ್ಬರು ಭತ್ತದ ಸಸಿ ಮಡಿ ಮಾಡಿದ್ದರು. ಕೆಲ ದಿನಗಳ ಹಿಂದ ಸಸಿ ಮಡಿ ಮೇಲೆ ದಾಳಿ ಮಾಡಿರುವ ೫೦ಕ್ಕೂ ಹೆಚ್ಚು ಹಂದಿಗಳು, ಇಡೀ ಸಸಿ ಮಡಿ ಹಾಳು ಮಾಡಿವೆ. ಇದರಿಂದ ರೈತನಿಗೆ ೩೦,೦೦೦ ರೂ. ನಷ್ಟವಾಗಿದೆ. ಇಂಥದ್ದೇ ಘಟನೆ ಯರಗುಂಟೆ ಮತ್ತಿತರ ಕಡೆ ನಡೆದಿದೆ ಎಂದರು.
ಮಾಲಿಕರ ಸಭೆ ನಡೆಸಿ
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಆದಷ್ಟು ಬೇಗ ಹಂದಿ ಮಾಲಿಕರ ಸಭೆ ನಡೆಸಿ ಹಂದಿಗಳನ್ನು ಗ್ರಾಮಗಳಿಂದ ದೂರದ ಪ್ರದೇಶಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ರೈತರು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು. ಮನವಿಗೆ ಸ್ಪಂದಿಸಿದ ಡಿಸಿ ಮಹಾಂತೇಶ ಬೀಳಗಿ, ಶೀಘ್ರವೇ ಹಂದಿ ಸಾಕಣೆದಾರರ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಪ್ರತಿಭಟನೆ ವೇಳೆ ಕೆ.ಎಚ್. ಹನುಮಂತಪ್ಪ, ಐ.ಎಂ. ಅಣ್ಣಪ್ಪ ಸ್ವಾಮಿ, ವೈಘಿ.ಎಲ್. ಬಸವರಾಜಪ್ಪ, ಮಂಜುನಾಥ, ದೇವೇಂದ್ರಾಚಾರ್, ಉದಯಕುಮಾರ್, ಎಂ. ಮಾರುತಿ, ಆರ್.ಆರ್. ಹನುಮಂತಪ್ಪ, ಪ್ರಜ್ವಲ್, ಬಿ. ಸಿದ್ದೇಶ್, ರುದ್ರಪ್ಪಘಿ, ಎಸ್.ಎನ್. ತಿಪ್ಪೇಶ್, ಸುರೇಶ್ ಹಾಗೂ ಮೂರೂ ಗ್ರಾಮಗಳ ರೈತರು ಇದ್ದರು.