ಜು.3-ಎಸ್.ಟಿ. ಮೀಸಲಾತಿಯ ಹಕ್ಕೋತ್ತಾಯದ ನಡೆಯ ಚಿಂತನ-ಮಂಥನ ಸಭೆ
ಸುದ್ದಿ360 ದಾವಣಗೆರೆ.ಜು.01: ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯವನ್ನು ಬಲಪಡಿಸಲು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಹರಿಹರದ ಕನಕಗುರುಪೀಠದಲ್ಲಿ ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಕುರುಬರ ಎಸ್.ಟಿ. ಮೀಸಲಾತಿಯ ಮುಂದಿನ ಹಕ್ಕೋತ್ತಾಯದ ನಡೆಯ ಚಿಂತನ-ಮಂಥನ ಸಭೆಯು ಜು.3ರಂದು ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕನಕ ಗುರುಪೀಠದಲ್ಲಿ ನಡೆಯಲಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿರಂಜನಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ, ಹಿರೇಕೆರೂರು, ಹರಿಹರ, ಶಿಕಾರಿಪುರ, ಮೈಲಾರಗಳಲ್ಲಿ ಉತ್ತಮವಾದ ವಸತಿಯುತ ಶಾಲೆಗಳನ್ನು ಆರಂಭಿಸಿದ್ದಾರೆ. ಮುಂದುವರೆದು ಸಮುದಾಯದ ಮಹಾತ್ಕಾಂಕ್ಷೆಯ ಐಎಎಸ್, ಕೆ.ಎಎಸ್ ತರಬೇತಿ ಕೇಂದ್ರದ ಸ್ಥಾಪನೆಯ ಉದ್ದೇಶ ಸಾಕಾರಗೊಳ್ಳುತ್ತಿದ್ದು, ಈ ಸಂಸ್ಥೆಯನ್ನು ಯು.ಪಿ.ಎಸ್.ಸಿ.ಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಬೆಂಗಳೂರಿನ ಇನ್‌ಸೈಟ್ ಐಎಎಸ್ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದರು.
ಅದೇ ದಿನ ಕುರುಬ ಮತ್ತು ಸಮಾನಾರ್ಥ ಜಾತಿಗಳು ಕರ್ನಾಟಕ ರಾಜ್ಯದ ಎಸ್.ಟಿ. ಪಟ್ಟಿಯಲ್ಲಿದ್ದರೂ ಸಹ ರಾಜ್ಯದ ಎಲ್ಲಾ ಕುರುಬರಿಗೂ ವಿಸ್ತಾರವಾಗದೇ ಮೀಸಲಾತಿಯಿಂದ ವಂಚಿತವಾಗಿದೆ. ಎಸ್. ಟಿ. ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸತತವಾಗಿ ಮನವಿ, ಒತ್ತಾಯಗಳನ್ನು ಮಾಡಲಾಗುತ್ತಿದ್ದು, ಮನವಿಗೆ ಸ್ಪಂದಿಸಿದ್ದ ಸರ್ಕಾರ ಕುರುಬರ ಎಸ್.ಟಿ. ಮೀಸಲಾತಿಗಾಗಿ 2018ರಲ್ಲಿ ಆದೇಶ ಮಾಡಿದ್ದು, 2019, ಅಕ್ಟೋಬರ್ 15ರಂದು ಕಾಗಿನೆಲೆಯಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಚಾಲನೆ ನೀಡಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಧ್ಯಯನವನ್ನು ನಡೆಸಲಾಗಿದೆ. ಅಧ್ಯಯನವು ಪೂರ್ಣಗೊಳ್ಳುವ ಹಂತ ತಲುಪಿದ್ದು, ರಾಜ್ಯ ಸರ್ಕಾರವು ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ‘ಹಕ್ಕೊತ್ತಾಯದ ನಡೆಯ ಚಿಂತನ ಮಂಥನ ಸಭೆ’ಯಲ್ಲಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು, ಸಮುದಾಯದವರ ಸಮ್ಮುಖದಲ್ಲಿ ನಿರ್ಣಯ ಮಂಡಿಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಹಾಗೂ ಎಸ್. ಟಿ. ಮೀಸಲಾತಿಯ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ, ಜಿ. ಷಣ್ಮುಖಪ್ಪ, ಬಿ. ಜಿ. ಘನರಾಜ್, ಪರಮೇಶ್ ಆರ್. ಬಿ., ಹನುಮಂತಪ್ಪ ಸಲ್ಲಳ್ಳಿ, ನಾಗರಾಜು ಉಪಸ್ಥಿತರಿದ್ದರು