ಸುದ್ದಿ360 ಮಡಿಕೇರಿ, ಜು.23: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಉದ್ಯಾನವನದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ಶನಿವಾರ ಸಂಜೆ ನಡೆದಿದೆ.
ಉದ್ಯಾನವನದಲ್ಲಿ ಸಂಗೀತ ಕಾರಂಜಿ ನಡೆಯುವ ವೇಳೆ ಈ ಕಾಡಾನೆ ಪ್ರವೇಶಿಸಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಉದ್ಯಾನವನ ಪ್ರವೇಶಿಸಿದ ಕಾಡಾನೆ ಪ್ರವಾಸಿಗರನ್ನು ಭಯಭೀತಗೊಳಿಸಿದೆ.
ಜಲಾಶಯದ ಭದ್ರತಾಪಡೆಯ ಸಿಬ್ಬಂದಿಗಳು ಪ್ರವಾಸಿಗರನ್ನು ಸುರಕ್ಷಿತವಾಗಿ ಉದ್ಯಾನವನದಿಂದ ಹೊರ ಕಳುಹಿಸಿದ್ದಾರೆ.
ನಂತರ ಹಾರಂಗಿ ಗ್ರಾಮದ ಕಿರು ಸೇತುವೆಯ ಬಳಿಯ ಕಾವೇರಿ ದೇವಾಲಯ ಮುಂಭಾಗ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಉದ್ಯಾನದಿಂದ ಹೊರಕ್ಕೆ ಬಂದಿದೆ. ಮುಂದೆ ಗ್ರಾಮದೊಳಗಿನಿಂದ ಸಮೀಪದ ದೊಡ್ಡತ್ತೂರು ಅರಣ್ಯ ಪ್ರದೇಶ ಪ್ರವೇಶಿಸಿದೆ.