ಸುದ್ದಿ360 ದಾವಣಗೆರೆ, ಡಿ.31: ಗಂಧದ ಗುಡಿ, ಹಳ್ಳಿಮನೆ, ದೇಶಿ ಖಿಲ್ಲ, ಫುಡ್ ಪಾಯಿಂಟ್, ಈಶ್ವರ್, ಗೋಲ್ಡನ್ ಸ್ಪೂನ್ ರೆಸ್ಟಾರೆಂಟ್, ಫಾಲ್ ಆಫ್ ಫ್ಲೇವರ್ಸ್, ಫುಡೀಶಿಯಸ್ ಹ್ಯಾಲೊ ಸ್ಪೂಕಿ, ಹಕುನ ಮಟಾಟ ಇಂತಹ ಹೆಸರಿನ ಒಟ್ಟು 16 ಸ್ಟಾಲ್ಗಳು ಇಂದು ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯಭವನದಲ್ಲಿ ನಡೆದ ದವನ್ ಕಾರ್ನಿವಲ್-2022 ಜಾತ್ರೆಯ ವಾತಾವರಣವನ್ನೇ ನಿರ್ಮಿಸಿತ್ತು.
ದವನ್ ಇನ್ಟ್ಸಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ವತಿಯಿಂದ 2022ರ ಕೊನೆಯ ದಿನದಂದು ಆಯೋಜಿಸಲಾಗಿದ್ದ ದವನ್ ಕಾರ್ನಿವಲ್-2022ನ್ನು ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಾಟೀಲ್ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ವ್ಯವಹಾರ ನಿರ್ವಹಣೆಯ ಅನುಭವವನ್ನು ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳೇ ಬಂಡವಾಳ ಹೂಡಿ ಗೇಮ್ಸ್ ಮತ್ತು ಆಹಾರ ಮಳಿಗೆಗಳನ್ನು ಬಾಡಿಗೆ ಪಡೆದು, ನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಒಟ್ಟು 16 ತಂಡಗಳಾಗಿ ವಿಂಗಡಿಸಲಾಗಿದ್ದ ವಿದ್ಯಾರ್ಥಿಗಳ 16 ಸ್ಟಾಲ್ಗಳು ನಾಮುಂದು ತಾಮುಂದು ಎಂಬಂತೆ ಸ್ಪರ್ಧಾತ್ಮಕವಾಗಿ ಗಮನ ಸೆಳದರು. 16 ಸ್ಟಾಲ್ಗಳಿಂದ 3000ಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಲಾಗಿತ್ತು. ಮಾರಾಟದ ರೂಪುರೇಷೆಯ ಕಲೆಕೆಗಾಗಿ ಆಹಾರ ಸಮಿತಿ, ಕ್ರೀಡಾಸಮಿತಿ, ನಿರ್ವಹಣಾ ಸಮಿತಿ ಮತ್ತು ಶಿಸ್ತು ಸಮಿತಿಗಳು ವಿದ್ಯಾರ್ಥಿಗಳಿಂದಲೇ ನಿರ್ವಹಿಸಿ ಅಚ್ಚುಕಟ್ಟಾಗಿ ಮೂಡಿಬಂದವು.
ವೆಜ್ ಪನ್ನೀರ್ ಬಿರ್ಯಾನಿ, ಸಾಬುದಾನ ವಡಾ, ಶಾಹಿ ತುಕ್ರ, ಬಿಳಿ ಹೋಳಿಗೆ, ಬಿಜಾಪುರ್ ರೊಟ್ಟಿ, ಡ್ರಿಜ್ಲಿ ಬರ್ಫಿ, ಚನ್ನಾ ಮಸಾಲ, ಸ್ವೀಟ್ ಬಾಲ್, ಕ್ರೀಮ್ ಗ್ಲಾಸಿ, ಕಚೋರಿ, ಕಾಯಿ ಹೋಳಿಗೆ, ರಸಮಲೈ, ದಾಲ್ ತಡ್ಕ, ವೆಜ್ ಫ್ರೈಡ್ ರೈಸ್ ಹೀಗೆ ನಾನಾ ಬಗೆಯ ಭಕ್ಷ್ಯಗಳು ಆಹಾರ ಪ್ರಿಯರ ಹಸಿವು ನೀಗಿಸಿದವು.
ಹಾಗೆಯೇ ಡೋರ್ ಡೈಸ್, ಕಪ್ ಟವರ್, ಡ್ರಾಪ್ ದಿ ಕಾಯಿನ್, ಸ್ವಿಚ್ ದಿ ಫ್ಲಿಪ್, ಕ್ಯಾಚ್ ದಿ ಪೆನ್ಸಿಲ್, ಬಜ್ ವೈರ್, ಟಚ್ ಮಿ ನಾಟ್, ಸ್ಪಿನ್ ದಿ ವ್ಹೀಲ್, ಪಿಕ್ ದಿ ಬಾಟಲ್, ಸೀಕ್ ದಿ ಆಬ್ಜೆಕ್ಟ್ ಹೀಗೆ ನಾನಾ ಬಗೆಯ ಆಟಗಳಿಗಾಗಿ ಟಿಕೆಟ್ ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳ ಉತ್ತಮ ವ್ಯವಹಾರವನ್ನು ನಿರ್ವಹಿಸಿದರು.
ಇದರ ಜೊತೆಗೆ ವಿದ್ಯಾರ್ಥಿಗಳಿಗಾಗಿ ವೇದಿಕೆಯೊಂದನ್ನು ನಿರ್ಮಾಣ ಮಾಡಿ, ಪ್ರತಿ ತಂಡದ ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಟ್ಟಾರೆ ಕಾರ್ನಿವಲ್‍ನಲ್ಲಿ ಪಾಲ್ಗೊಂಡ ಪಾಲಕರು, ಪೋಷಕರು ಹಾಗೂ ಆಹಾರ ಪ್ರಿಯರು ಮಕ್ಕಳ ಪ್ರತಿಭೆಯನ್ನು ಎಂಜಾಯ್ ಮಾಡಿದರು.
ದಾವಣಗೆರೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸುಬ್ರಹ್ಮಣ್ಯ ಡಿ.ಕೆ., ಸಂಕಮ್ ಹೋಟೆಲ್ ಮಾಲೀಕ ಆಕಾಶ್ ಹೆಗ್ಡೆ, ಎಸ್.ಎಸ್. ಕ್ಯಾಟರಿಂಗ್ ಮಾಲೀಕ ಹರೀಶ್, ದವನ್ ಕಾಲೇಜು ಜಂಟಿ ಕಾರ್ಯದರ್ಶಿ ಅಂಜು ಟಿ.ಎಸ್., ನಿರ್ದೇಶಕ ಹರ್ಷರಾಜ್ ಗುಜ್ಜರ್, ಉಪಪ್ರಾಂಶುಪಾಲರಾದ ಅನಿತಾ ಎನ್., ಅಶ್ವಿನಿ ಎಚ್.ಸಿ.,ಕೊಟ್ರಪ್ಪ ಸೇರಿದಂತೆ ಕಾಲೇಜು ಸಿಬ್ಬಂದಿ ಇದ್ದರು.