ಸುದ್ದಿ360,ದಾವಣಗೆರೆ,ಜು.05: ತಮಿಳುನಾಡಿನ ಸೇಲಂನಿಂದ ನಗರಕ್ಕೆ 102 ಕೆ.ಜಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ಅಕ್ರಮವಾಗಿ ತಂದಿದ್ದ 20 ಲಕ್ಷ ರೂ. ಮೌಲ್ಯದ 102 ಕೆಜಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ನಗರದ ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್, ಆರೋಪಿಗಳಾದ ಸೆಲ್ವಿ ಮತ್ತು ಬಾಲಾಜಿ ಎಂಬುವರು ತಮಿಳುನಾಡಿನ ಸೇಲಂನಿಂದ ನಗರಕ್ಕೆ 102 ಕೆ.ಜಿ ಬೆಳ್ಳಿ ಕಾಲ್ಗೆಜ್ಜೆಗಳನ್ನು ಬಿಲ್ ಹಾಗೂ ಯಾವುದೇ ದಾಖಲೆಗಳಿಲ್ಲದೆ ತಂದಿದ್ದರು. ಈ ಬಗ್ಗೆ ದೊರೆತ ಮಾಹಿತಿ ಆಧರಿಸಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ. ಬಸರಗಿ ಮಾರ್ಗದರ್ಶನದಲ್ಲಿ ಬಡಾವಣೆ ಠಾಣೆ ಪೊಲೀಸ್ ಇನ್ಸ್ಪೆಕಕ್ಟರ್ ಧನಂಜಯ ನೇತೃತ್ವದ ತಂಡ ದಾಳಿ ನಡೆಸಿ ಬೆಳ್ಳಿ ಚೈನ್ ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದರು.
ಇಷ್ಟೊಂದು ಪ್ರಮಾಣದ ಬೆಳ್ಳಿ ಗೆಜ್ಜೆಗಳನ್ನು ತಂದಿದ್ದ ಆರೋಪಿಗಳು ಬೇರೆಡೆಯಿಂದ ಹಳೆಯ ಬೆಳ್ಳಿ ಖರೀದಿಸಿ, ಪಾಲೀಶ್ ಮಾಡಿ ಸಾಗಿಸುತ್ತಿದ್ದರು ಎಂಬ ಮಾಹಿತಿಯಿದ್ದು, ವಿಚಾರಣೆ ಬಳಿಕ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ತಿಳಿಯಲಿದೆ. ಪ್ರಕರಣ ಪತ್ತೆ ತಂಡದಲ್ಲಿದ್ದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡುವ ಜತೆಗೆ ಅವರ ಹೆಸರನ್ನು ಅತ್ಯುತ್ತಮ ಸೇವೆ ಪಟ್ಟಿಗೆ ಸೇರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ. ಬಸರಗಿ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ತನಿಖಾ ತಂಡದ ಸಿಪಿಐ ಧನಂಜಯ, ಪಿಎಸ್ಐ ಎನ್.ಎಸ್. ಅಶ್ವತ್ಥಕುಮಾರ್, ಸಿಬ್ಬಂದಿ ಸಿದ್ದೇಶ್, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ ಇತರರು ಇದ್ದರು.