18 ಕೋಟಿ ವೆಚ್ಚದಲ್ಲಿ ಶೀಥಿಲೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಸುದ್ದಿ360 ದಾವಣಗೆರೆ, ಸೆ. 06: ರೈತರು ತಾವು ಬೆಳೆದಂತಹ ಬೆಳೆಗೆ ಕಟಾವು ಸಂದರ್ಭದಲ್ಲಿ ಉತ್ತಮ ಬೆಲೆ ದೊರಕದೆ ಕಂಗಾಲಾಗುವುದನ್ನು ತಪ್ಪಿಸಲು ಶಿಥೀಲೀಕರಣ ಘಟಕ ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ನಗರದ ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ನಬಾರ್ಡ್ ಆರ್ ಐ ಡಿ ಎಫ್ 27ರಲ್ಲಿ 9 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಶಿಥಿಲೀಕರಣ ಘಟಕ, 4 ಕೋಟಿ 3 ಲಕ್ಷ ರೂ. ವೆಚ್ಚದಲ್ಲಿ ಸಮಗ್ರ ಕೃಷಿ ಪದ್ಧತಿ ಜೇಷ್ಠತಾ ಕೇಂದ್ರ (ಸೆಂಟರ್ ಆಫ್ ದಿ ಎಕ್ಸಲೆನ್ಸ್). ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಗಾಗಿ 3 ಕೋಟಿ 75 ಲಕ್ಷ ಒಟ್ಟು 17 ಕೋಟಿ 78 ಲಕ್ಷದ ಮೂರು ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
12ನೇ ತಾರೀಖಿನೊಳಗೆ ನೆರೆ ಪರಿಹಾರ ಫಲಾನುಭವಿಗಳ ಖಾತೆಗೆ
ದಾವಣಗೆರೆ ಜಿಲ್ಲೆಯಲ್ಲಿ ಹದಿನಾರು ಸಾವಿರ ಹೆಕ್ಟೇರ್ ಕೃಷಿ ಭೂಮಿ ನೆರೆ ಹಾವಳಿಗೆ ಒಳಪಟ್ಟಿದೆ. ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಶೇ.50 ರಷ್ಟು ಪೋರ್ಟಲ್ ನಲ್ಲಿ ನಮೂದಾಗಿದ್ದು, ಈಗಾಗಲೇ ಜಾಂಯ್ಟ್ ಸರ್ವೆ ಕೂಟ ಆಗಿದೆ. ಉಳಿದ ಶೇ50 ರ ಮಾಹಿತಿ ನಮೂದಿಸಲು ತಹಸೀಲ್ದಾರರಿಗೆ ಸೂಚನೆ ನೀಡಲಾಗಿದ್ದು. ಪೋರ್ಟಲ್ ನಲ್ಲಿ ನಮೂದಾದ 48 ಗಂಟೆಯೊಳಗೆ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಇದೇ 12ನೇ ತಾರೀಖಿನೊಳಗೆ ರೈತರ ಖಾತೆಗೆ ಪರಿಹಾರ ಹಣ ಸಂದಾಯವಾಗಲಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ ವರ್ಷ ನಬಾರ್ಡ್ ಆರ್ ಐ ಡಿ ಎಫ್ 27ರಲ್ಲಿ ಕೃಷಿ ಇಲಾಖೆಯಿಂದ 11 ಶಿಥಿಲೀಕರಣ ಘಟಕ ರಾಜ್ಯಾದ್ಯಂತ ಸ್ತಾಪಿಸಲಾಗುತ್ತಿದ್ದು, ದಾವಣಗೆರೆಯಲ್ಲಿಯೂ ಸಹ ಇದರ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿರುವುದು ಖುಷಿ ತಂದಿದೆ ಎಂದು ಕೃಷಿ ಸಚಿವರಾದ ಬಿ ಸಿ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.
ಶಿಥಿಲೀಕರಣ ಘಟಕ ಎರಡೂವರೆ ಸಾವಿರ ಮೆಟ್ರಿಕ್ ಟನ್ ನಷ್ಟು ಸಂಗ್ರಹ ಸಾಮರ್ಥ್ಯ ಹೊಂದಿರಲಿದ್ದು, ರೈತರು ತಮ್ಮ ಬೆಳೆಯನ್ನು ಇಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರುಕಟ್ಟಗೆ ಬಿಡುವ ಮೂಲಕ ಮಾರುಕಟ್ಟೆಯ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದರು.
ದಾವಣಗೆರೆ ನನ್ನ ನೆಚ್ಚಿನ ತಾಣ
ವಿದ್ಯಾರ್ಥಿದಿಶೆಯಿಂದಲೂ ದಾವಣಗೆರೆ ನಂಟು ನನಗೆ ಇದೆ. ಪೊಲೀಸ್ ಅಧಿಕಾರಿಯಾಗಿಯೂ ಇಲ್ಲಿಸೇವೆ ಸಲ್ಲಿಸಿದ್ದೇನೆ. ಅಡೀಷನಲ್ ಡೈರೆಕ್ಟರ್ ದಿವಾಕರ್ ರವರೂ ಸಹ ವಿಶೇಷ ಕಾಳಜಿ ವಹಿಸಿದ್ದರಿಂದ ಈ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆಯಾಗುತ್ತಿದ ಎಂದು ತಿಳಿಸಿದ ಸಚಿವರು, ಜನವರಿ ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್. ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.