2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಲು ಎಂ.ಸಿ.ವೇಣುಗೋಪಾಲ್ ಕರೆ

ದಾವಣಗೆರೆ, ಜೂ.14: ದೇಶ ಎತ್ತ ಸಾಗುತ್ತಿದೆ ಎಂದು ಯೋಚನೆ ಮಾಡಬೇಕಾದ ಸ್ಥಿತಿ ಇಂದು ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ರಕ್ಷಣೆ, ಎಲ್ಲರೂ ನೆಮ್ಮದಿಯಿಂದ ಬಾಳುವ, ಯುವ ಜನರಿಗೆ ಉದ್ಯೋಗ ಒದಗಿಸುವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್ ಕರೆ ನೀಡಿದರು.

ನಗರದ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ನವಸಂಕಲ್ಪ ಚಿಂತನಾ ಶಿಬಿರದ ಉದ್ಘಾಟಸಿ ಮಾತನಾಡಿ, ಕಾಂಗ್ರೆಸ್‌ಗೆ ಅಧಿಕಾರ ಮುಖ್ಯವಲ್ಲ. ದೇಶದ ಮತ್ತು ಕರ್ನಾಟಕದ ಜನತೆಯ ರಕ್ಷಣೆ ಅತೀ ಮುಖ್ಯ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ೨ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕು ಎಂದು ಹೆಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಮತ್ತೆ ತಳಮಟ್ಟದಿಂದ ಕಟ್ಟಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ನವಸಂಕಲ್ಪ ಚಿಂತನಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಚಿಂತನಾ ಸಭೆಯಲ್ಲಿ ರೈತರ, ಯುವ ಜನಾಂಗ, ನಿರುದ್ಯೋಗ, ಮಹಿಳಾ, ಮಕ್ಕಳು, ಸಾಮಾಜಿಕ ನ್ಯಾಯ ಇತರೆ ವಿಷಯಗಳ ಬಗ್ಗೆ ನೀಡಲಾಗುವ ಸಲಹೆ, ಸೂಚನೆ ಸಂಗ್ರಹಿಸಿ ಕೆಪಿಸಿಸಿ ಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು. ಚಿಂತನಾ ಸಭೆಯಲ್ಲಿ ವ್ಯಕ್ತವಾಗುವ ಮುಖ್ಯ ಸಲಹೆ ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು. ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಧಿಕಾರಕ್ಕೆ ಬಂದ ನಂತರ ಪರಿಹಾರವನ್ನು ಕಂಡುಕೊಳ್ಳಲಾಗುವುದು. ಸಭೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ವಿಷಯ, ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮಾಜಿ ಶಾಸಕರಾದ ಕೆ.ಶಿವಮೂರ್ತಿ, ಡಿ.ಜಿ.ಶಾಂತನಗೌಡ, ಎಚ್.ಪಿ.ರಾಜೇಶ್, ಅನಿತಾಬಾಯಿ, ಕೆ.ಎಸ್.ಬಸವಂತಪ್ಪ, ನಿಖಿಲ್ ಕೊಂಡಜ್ಜಿ, ಜಿ.ಎಸ್.ಮಂಜುನಾಥ್, ಬಿ.ಎಚ್.ವೀರಭದ್ರಪ್ಪ, ಲತಾ ಮಂಜುನಾಥ್, ನಂಜಾನಾಯ್ಕ, ಅಸಗೋಡು ಜಯಸಿಂಹ, ಕೆ.ಪಿ.ಪಾಲಯ್ಯ, ಪ್ರಕಾಶ್ ಪಾಟೀಲ್, ಶಾಸಕ ಎಸ್.ರಾಮಪ್ಪ, ಅಲಿ ರಹಮತ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!