ದಾವಣಗೆರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಸುದ್ದಿ360 ದಾವಣಗೆರೆ, ಜು.12: 2023ರಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಸರ್ಕಾರ ಬರುತ್ತದೆ. 135 ಕ್ಕೂ ಹೆಚ್ಚು ಸ್ಥಾನಗಳನ್ನ ಕಾಂಗ್ರೆಸ್ ಗೆಲ್ಲುತ್ತದೆ. ಈಗ ಚುನಾವಣೆ ಮಾಡಿದರೂ ನಾವು ಚುನಾವಣೆಗೆ ಸಿದ್ಧರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ನಾಯಕರಿಗೆ ಈಗಾಗಲೇ ಭಯ ಶುರುವಾಗಿದೆ. ವಿಶೇಷವಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಕೆಎಸ್ ಈಶ್ವರಪ್ಪ ಅವರಿಗೆ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಅವರು ಅಮೃತ ಮಹೋತ್ಸವದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನ ಪಕ್ಷದ ವರಿಷ್ಠರು ಹಾಗೂ ಶಾಸಕರು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.
ಸಿಎಂ ಬೊಮ್ಮಾಯಿ ಕಡೆ ಬೊಟ್ಟು
ಪಿಎಸ್ ಐ ನೇಮಕಾತಿ ಹಗರಣ ಸಂಬಂಧಿಸಿದಂತೆ ಸಿದ್ಧರಾಮಯ್ಯ ಅವರು ಸಿಎಂ ಬೊಮ್ಮಾಯಿ ಕಡೆ ಬೊಟ್ಟು ಮಾಡಿದ್ದಾರೆ. ನಾನು ಹೋರಾಟ ಮಾಡಿದ್ದರಿಂದ ಪಿಎಸ್ ಐ ನೇಮಕಾತಿ ಹಗರಣ ಬೆಳಕಿಗೆ ಬಂದಿದೆ. ಈಗ ಅಮೃತ್ ಪಾಲ್ ಅವರನ್ನ ಬಂಧಿಸಿದ್ದಾರೆ. ತಪ್ಪಿತಸ್ತರು ಯಾವುದೇ ಪಕ್ಷದವರಾಗಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.
ಈ ಹಿಂದೆ ನೇಮಕಾತಿ ಆದಾಗ ಬಸವರಾಜ್ ಬೊಮ್ಮಾಯಿಯವರೇ ಗೃಹ ಸಚಿವರಾಗಿದ್ದರು. ಹಾಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇದರಲ್ಲಿ ಶಾಮೀಲಾಗಿದ್ದಾರೆ. ರಾಜಕಾರಣಿಗಳ ಕುಮ್ಮಕ್ಕು ಇಲ್ಲದೇ ಈ ಹಗರಣ ಆಗಲು ಸಾದ್ಯವೇ ಇಲ್ಲ ಎಂದರು.
ಹತ್ತಾರು ಕಡೆಯಿಂದ ಆಹ್ವಾನ
ಬಾದಾಮಿ, ಕೋಲಾರ ಸೇರಿದಂತೆ ಹತ್ತಾರು ಕಡೆಯಿಂದ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಕರೆಯುತ್ತಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದರ ಬಗ್ಗೆ ಈಗಲೇ ಏನು ಹೇಳಲ್ಲ. ಚುನಾವಣೆ ಹತ್ತಿರಕ್ಕೆ ಬಂದ ಮೇಲೆ ಹೇಳುತ್ತೆನೆ ಎಂದರು.
ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರಿಗೆ ಅನ್ಯಾಯ
ಜಿಲ್ಲಾ ಪಂಚಾಯಿತ್ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಜೊತೆಗೆ ಮೀಸಲಾತಿ ಇಲ್ಲದೇ ಚುನಾವಣೆ ನಡೆಸಿದ್ರೆ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರರಿಗೆ ಅನ್ಯಾಯವಾಗುತ್ತದೆ ಎಂದ ಸಿದ್ದರಾಮಯ್ಯ ಹೇಳಿದರು.