ಸುದ್ದಿ360 ದಾವಣಗೆರೆ ಜ.5: ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯಲ್ಲಿ ಹೊಸ ಮತದಾರರ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು, 2023ರ ಜ.1ಕ್ಕೆ 18 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಜಿಲ್ಲೆಯ ಎಲ್ಲ ಏಳು ವಿಧಾನಸಭೆ ಕ್ಷೇತ್ರಗಳ ಮತದಾರರ ಪರಿಷ್ಕೃತ ಅಂತಿಮ ಪಟ್ಟಿ ಸಿದ್ಧವಾಗಿದೆ. ಆದರೆ, ಈಗಲೂ ಹೊಸ ಮತದಾರರ ಹೆಸರು ಸೇರಿಸಲು ಅವಕಾಶ ಇರುವುದಾಗಿ ತಿಳಿಸಿದರು.
ಹೊಸದಾಗಿ ಹೆಸರು ಸೇರಿಸುವುದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಜ.6ರಿಂದ ಸ್ವೀಕರಿಸಲಾಗುವುದು. ಚುನಾವಣಾ ಆಯೋಗದ ವತಿಯಿಂದ ಪ್ರತಿ ಕಾಲೇಜುಗಳಿಗೆ ತಂಡಗಳನ್ನು ಕಳುಹಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಪ್ರಚಾರ ಮಾಡಲಾಗಿದೆ. ಅದರಂತೆ 26,000 ಹೊಸ ಮತದಾರರು ಇದ್ದಾರೆ ಎಂಬ ಮಾಹಿತಿ ಇತ್ತು. ಆ ಪೈಕಿ ಈಗಾಗಲೆ 23,000 ಯುವ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ಉಳಿದ 3,000 ಮತದಾರರನ್ನು ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.