ಸುದ್ದಿ360 ಗೋಪಾಲಗಂಜ್ (ಬಿಹಾರ) ಜು.31: ಒಂದು ದಿನ ಸ್ನಾನ ಮಾಡದೇ ಇದ್ದರೂ ಚಡಪಡಿಕೆಗೆ ಒಳಗಾಗುವವರನ್ನು ನೋಡಿದ್ದೇವೆ ಮತ್ತು ಅನುಭವಿಸಿಯೂ ಇದ್ದೇವೆ. ಇಲ್ಲೊಬ್ಬ ವ್ಯಕ್ತಿ ಒಂದು ದಿನ. . . . ತಿಂಗಳು. . . ವರ್ಷ. . . !? ಅಲ್ಲವೇ ಅಲ್ಲ ಬರೋಬ್ಬರಿ 22 ವರ್ಷಗಳಿಂದ ಸ್ನಾನ ಮಾಡುವುದನ್ನು ನಿಲ್ಲಿಸಿ, ಆರೋಗ್ಯವಾಗಿಯೇ ಇದ್ದಾರೆ.
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಮಂಜಾ ಬ್ಲಾಕ್ ನಲ್ಲಿರುವ ಬೈಕುಂತ್ ಪುರ ಗ್ರಾಮದ 62 ವರ್ಷದ ಧರಂದೇವ್ ರಾಮ್ ಈ ರೀತಿಯಾಗಿ ಸ್ನಾನವನ್ನು ತ್ಯಿಜಿಸಿ ಜೀವಿಸುತ್ತಿರುವ ವ್ಯಕ್ತಿ.
ಸ್ನಾನ ತ್ಯಜಿಸಿದ್ದಾದರೂ ಯಾಕೆ ಅಂತೀರಾ…?
ಧರಂದೇವ್ ರಾಮ್ ತನ್ನ 40ನೇ ವಯಸ್ಸಿನಲ್ಲಿ ಮಹಿಳೆಯರ ಮೇಲಿನ ಅಪರಾಧ, ಭೂ ವಿವಾದಗಳು ಮತ್ತು ಸಾವುಗಳು ಸಂಪೂರ್ಣವಾಗಿ ನಿಲ್ಲುವವರೆಗೂ ಸ್ನಾನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದು ಇವರು ಇದುವರೆಗೂ ಸ್ನಾನ ಮಾಡದಿರಲು ಕಾರಣವಾಗಿದ್ದು, ಮಗ ಮತ್ತು ಹೆಂಡತಿಯ ನಿಧನದ ನಂತರವೂ ಅವರು ಸ್ನಾನ ಮಾಡಿಲ್ಲ.
ಆಶ್ಚರ್ಯಕರ ಸಂಗತಿಯೆಂದರೆ, ಧರಂದೇವ್ ಅವರ ಯೋಗಕ್ಷೇಮದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಬೀರಿಲ್ಲವಂತೆ. ಅವರಿಗೆ ಯಾವುದೇ ಕಾಯಿಲೆ ಇರದೆ ಚೆನ್ನಾಗಿಯೇ ಇದ್ದಾರೆ.
ಅವರೇ ಹೇಳಿಕೊಂಡಿರುವಂತೆ “1975ರಲ್ಲಿ ಬಂಗಾಳದ ಜಗದಾಲ್‌ನಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿ, 1978ರಲ್ಲಿ ಮದುವೆಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದೆ. ಆದರೆ 1987ರಲ್ಲಿ ಜಮೀನು ವಿವಾದಗಳು, ಪ್ರಾಣಿಗಳ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗತೊಡಗಿದವು. ಹಾಗಾಗಿ ಉತ್ತರವನ್ನು ಹುಡುಕುತ್ತಾ ಸಾಗಿದೆ. ನನ್ನನ್ನು ಶಿಷ್ಯನನ್ನಾಗಿ ತೆಗೆದುಕೊಂಡು ಭಕ್ತಿ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದ ‘ಗುರು’ ವನ್ನು ನಾನು ಸಂಪರ್ಕಿಸಿದೆ. ಅಂದಿನಿಂದ ನಾನು ಭಕ್ತಿಯ ಮಾರ್ಗದಲ್ಲಿ ಸಾಗಿದೆ ಮತ್ತು ಭಗವಾನ್ ರಾಮನನ್ನು ಧ್ಯಾನಿಸಲು ಪ್ರಾರಂಭಿಸಿದೆ” ಎಂದು ಧರಂದೇವ್ ಹೇಳಿಕೊಂಡಿದ್ದಾರೆ.
2000 ರಲ್ಲಿ ಅವರು ಕೆಲಸ ಮಾಡುತ್ತಿದ್ದ ಕಾರ್ಖಾನೆಗೆ ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ಅವರ ಕುಟುಂಬ ಅವರನ್ನು ಮರಳಿ ಸೇರುವಂತೆ ಒತ್ತಾಯಿಸಿದೆ. ನಂತರ ಧರಂದೇವ್ ಊಟ ಮತ್ತು ಸ್ನಾನವನ್ನು ತ್ಯಜಿಸಿದ್ದಾರೆ. ಈ ವಿಚಾರ ಫ್ಯಾಕ್ಟರಿ ಮ್ಯಾನೇಜರ್ ಗೆ ಗೊತ್ತಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. 2003 ರಲ್ಲಿ ಅವರ ಪತ್ನಿ ಮಾಯಾದೇವಿ ನಿಧನರಾಗಿದ್ದಾರೆ. ಆದರೆ ಅವರು ಸ್ನಾನ ಮಾಡಲಿಲ್ಲ. ನಂತರ, ಅವರ ಒಬ್ಬ ಮಗ ನಿಧನರಾಗಿದ್ದಾರೆ. ತನ್ನ ಮಾತಿಗೆ ನಿಂತ ಧರಂದೇವ್ ಆಗಲೂ ಸ್ನಾನ ಮಾಡಿಲ್ಲ. ಜುಲೈ 7, 2022 ರಂದು ಧರ್ಮದೇವ್ ಅವರ ಇನ್ನೊಬ್ಬ ಮಗ ನಿಧನರಾದರು ಮತ್ತು ಅವರು ಇನ್ನೂ ಸ್ನಾನ ಮಾಡಿಲ್ಲವಂತೆ. ಧರಂದೇವ್ ಅವರ ಹೇಳಿಕೆಯನ್ನು ಸ್ಥಳೀಯ ನಿವಾಸಿಗಳು ಕೂಡ ಖಚಿತಪಡಿಸಿದ್ದಾರೆ.
ಧರಂದೇವ್ ಪ್ರತಿಜ್ಞೆಗೆ ಕಾರಣವಾಗಿರುವ ಮಹಿಳೆಯರ ಮೇಲಿನ ಅಪರಾಧ, ಭೂ ವಿವಾದದ ಸಾವುಗಳು ಆದಷ್ಟು ಬೇಗ ಸಂಪೂರ್ಣವಾಗಿ ನಿಲ್ಲಲಿ ಎಂಬುದು ಸುದ್ದಿ360 ಬಳಗದ ಆಶಯ.
ಕೃಪೆ: ಅಂತರ್ಜಾಲ