ಸುದ್ದಿ360 ದಾವಣಗೆರೆ, ಸೆ.09: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಸಿದರು.
ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಯುಬಿಡಿಟಿ ಕಾಲೇಜಿನಿಂದ ಕಾಲ್ನಡಿಗೆಯಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಮ್ಮ ಬೇಡಿಕೆಗಳ ಈಡೆರಿಸುವಂತೆ ಘೋಷಣೆಗಳನ್ನು ಕೂಗಿದರು.
ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪಡೆದ ಏಜೆನ್ಸಿಯವರು ತಿಂಗಳ ಕೊನೆಯ ವಾರ ಬಂದರೂ ವೇತನ ನೀಡುವುದಿಲ್ಲ, ಇದರಿಂದ ವೇತನವನ್ನೇ ನಂಬಿಕೊಂಡಿರುವ ನೌಕರರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲದ ಕಾರಣ, ಮೊದಲೇ ಮುನ್ಸೂಚನೆ ನೀಡಿದಂತೆ ಮುಷ್ಕರದ ಹಾದಿಯನ್ನು ಹಿಡಿದಿದ್ದು, ಸೆ.6ರಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಹೋರಾಟ ಮಾಡುತ್ತಿದ್ದು ನಾಲ್ಕನೇ ದಿನಕ್ಕೆ ಮುಂದುವರೆದರೂ ಯಾವುದೇ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂಬುದಾಗಿ ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡರು.
ರಾಜ್ಯ ಸರಕಾರದ ಆದೇಶದಂತೆ ಎಲ್ಲ ನೌಕರರಿಗೆ ಕನಿಷ್ಠ ವೇತನ ಜಾರಿ, ಪ್ರತಿ ತಿಂಗಳು 5ರೊಳಗೆ ವೇತನ ಪಾವತಿ, ನೌಕರರು ನಿರ್ವಹಿಸುವ ಹುದ್ದೆಯ ಪದನಾಮ ನಮೂದಿಸುವುದು, ಪಿಎಫ್, ಇಎಸ್‌ಐಗೆ ಕಡಿತಗೊಳ್ಳುವ ಹಣದ ಬಗ್ಗೆ ಮಾಹಿತಿ ಇಲ್ಲದ ಕಾರಣ ವೇತನ ಪತ್ರ ನೀಡಬೇಕು, ಬಾಕಿ ಇರುವ ಇಪಿಎಫ್ ಹಣ ಪಾವತಿ, ಭದ್ರತಾ ಸಿಬ್ಬಂದಿಗೆ ತಿಂಗಳಲ್ಲಿ ಒಂದು ದಿನದ ರಜೆಯ ಸೌಲಭ್ಯ ನೀಡುವುದು, ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನೇ ಖಾಯಂಗೊಳಿಸಬೇಕು ಸೇರದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಕೈದಾಳೆ, ಬಸವರಾಜ್ ಎಸ್., ಪ್ರಸನ್ನಕುಮಾರ್ ಎ., ವಿಶ್ವನಾಥ ಬಿ.ಎಂ., ಮರುಳಸಿದ್ದಪ್ಪ ಕೆ., ಗಂಗಮ್ಮ, ರೇಣುಕಮ್ಮ, ಶಹನಾಜ್ ಬಾನು, ವಿನಯ್ ಹಾಗೂ ನೊಂದ ನೌಕರರು ಪಾಲ್ಗೊಂಡಿದ್ದರು.