ಸುದ್ದಿ360, ವಿಜಯನಗರ ಜು.13: ಹೊಸಪೇಟೆ ತುಂಗಭದ್ರ ಜಲಾಶಯ ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಜಲಾಶಯದಿಂದ 30 ಕ್ರಸ್ಟ್ ಗೇಟ್ ಗಳ ಮೂಲಕ 103174 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬಂದ ಪರಿಣಾಮ ಐತಿಹಾಸಿಕ ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ.
ನದಿ ಪಾತ್ರದಲ್ಲಿರುವ ವಿಶ್ವವಿಖ್ಯಾತ ಹಂಪಿಯ ವಿಜಯನಗರ ಕಾಲದ ಸೇತುವೆ, ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ಜಲಾವೃತಗೊಂಡಿದ್ದು, ಪ್ರವಾಸಿಗರು ಅತ್ತ ಹೋಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಜಲಾಶಯದಿಂದ ಸಧ್ಯ 1 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿ ಹರಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ 1.50 ಲಕ್ಷ ಕ್ಯೂಸೆಕ್ ವರೆಗೂ ನೀರು ಹರಿಸುವ ಸಾಧ್ಯತೆ ಇದೆ. ಆ ಕಾರಣದಿಂದ ನದಿ ಪಾತ್ರದ ಜನತೆ ಜಾಗ್ರತೆ ವಹಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿ ತುಂಗಭದ್ರ ಜಲಾಶಯ ಮಂಡಳಿ ತಿಳಿಸಿದೆ.
ಜಲಾಶಯ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸಧ್ಯ99.976 ಟಿಎಂಸಿ ನೀರು ಸಂಗ್ರವಾಗಿದೆ. ಇನ್ನೂ ಪ್ರತಿ ಗಂಟೆಗೆ 1 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಜಲಾಶಯ ಮಟ್ಟ 1631.54 ಅಡಿಗೆ ತಲುಪಿದೆ. ಡ್ಯಾಂನ 33 ಕ್ರಸ್ಟ್ ಗೇಟ್ ಗಳ ಪೈಕಿ 10 ಗೇಟ್ ಗಳನ್ನು 2 ಅಡಿ ಮತ್ತು 20 ಗೇಟ್ ಗಳನ್ನು 2.5ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ. ಮೈದುಂಬಿ ಹರಿಯುತ್ತಿರುವ ಜಲಾಶಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಾಶಯದ ಸಮೀಪದ ಹಳೆ ಸೇತುವೆ ಬಳಿ ಜನರು ತೆರಳದಂತೆ ಪೊಲೀಸರು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.