ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದ ಗುರು ಪೂರ್ಣಿಮೆ
ಸುದ್ದಿ360 ದಾವಣಗೆರೆ, ಜು.13: ಗುರು ಪೂರ್ಣಿಮೆ ಪ್ರಯುಕ್ತ ಇಂದು ಬುಧವಾರ ಬಾಬಾ ಮಂದಿರಗಳಲ್ಲಿ ನೆರೆದ ಭಕ್ತರು, ಸಾಯಿಬಾಬಾರ ದರ್ಶನ ಪಡೆದು, ಜೈ ಸಾಯಿರಾಂ ಘೋಷದೊಂದಿಗೆ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು.
ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಗುರು ಪೂರ್ಣಿಮೆಾ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 6 ಗಂಟೆಯಿಂದಲೇ ಬಾಬಾ ದರ್ಶನ ಪಡೆಯಲು ತಂಡೋಪತಂಡವಾಗಿ ಆಗಮಿಸಿದರು. ಬರಬರುತ್ತಾ ಭಕ್ತರ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗಿ ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಬಾಬಾ ದರ್ಶನ ಪಡೆದರೆ, ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಿದ್ದಾರೆ. ಗುರು ಪೂರ್ಣಿಮೆ ಪ್ರಯುಕ್ತ ಸಂಕಲ್ಪ ಮಾಡಿಕೊಂಡಿದ್ದ 150 ಭಕ್ತರು ಧುನಿ ಪೂಜೆ ನೆರವೇರಿಸಿರುವುದಾಗಿ ಶ್ರೀ ಸಾಯಿ ಟ್ರಸ್‌ನ ಕಾರ್ಯಕಾರಿ ಟ್ರಸ್ಟಿ ಜಿತೇಂದ್ರಕುಮಾರ್ ಬೇತೂರು ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಗೆ ಕಾಕಡಾರತಿ, 9 ಗಂಟೆಗೆ ದೀಪಾರಾಧನೆ, ಕಳಶ ಸ್ಥಾಪನೆ, ನಂತರ ಗೋಪುರ ಧ್ವಜಾರೋಹಣ ನೆರವೇರಿತು. ನಗರದ ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ವೇದಾಂತಚಾರ್ಯ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕಳಶ ಸ್ಥಾಪನೆ, ನಂತರ ಗೋಪುರ ಧ್ವಜಾರೋಹಣ ನೆರವೇರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶ್ರೀ ಸಾಯಿ ಟ್ರಸ್ಟ್ ಆಜೀವ ಛೇರ್ಮನ್ ಶಾಮನೂರು ಶಿವಶಂಕರಪ್ಪ, ಟ್ರಸ್ಟ್ ಕಾರ್ಯಾಧ್ಯಕ್ಷ ಎಸ್.ಎಸ್. ಗಣೇಶ್, ಉಪಾಧ್ಯಕ್ಷ ಅಥಣಿ ವೀರಣ್ಣ, ಶ್ರೀ ಸಾಯಿ ಟ್ರಸ್ಟ್ ಸದಸ್ಯರು ಮಂದಿರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ಗುರು ಪೂರ್ಣಿಮೆ ಅಂಗವಾಗಿ ಎಂಸಿಸಿ ಬಿ ಬ್ಲಾಕ್‌ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರದಿಂದ ವಿಜಯದಶಮಿವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ ಸಾಯಿಬಾಬಾರ ಪುರಾಣ ಪ್ರವಚನ ನಡೆಯಲಿದೆ. ನಗರದ ವಿರೂಪಣ್ಣ ಅಂಬರ್‌ಕರ್ ಪ್ರವಚನ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಬಾಬಾಗೆ ಮಹಾಮಂಗಳಾರತಿ ಮಾಡಲಾಯಿತು. ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ಇದರೊಂದಿಗೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಶ್ರೀ ಸಾಯಿಬಾಬಾರ ಬೆಳ್ಳಿ ಮೂರ್ತಿಗೆ ಭಕ್ತರಿಂದ ಹಾಲಿನ ಅಭಿಷೇಕ, ವಿಶೇಷ ಪೂಜೆ, ಅಲಂಕಾರಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆಯಿಂದಲೇ ಮಂದಿರಕ್ಕೆ ಭೇಟಿ ನೀಡುವ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ಖಜಾಂಚಿ ಎಚ್.ಎಸ್. ಜಾಧವ್, ಕಾರ್ಯದರ್ಶಿ ಎಂ. ಶಿವಪ್ಪ, ಕಾರ್ಯಕಾರಿ ಟ್ರಸ್ಟಿಗಳಾದ ಎಸ್.ಜಿ. ಅಭಿಜಿತ್, ಕೆ.ಎನ್. ನಟರಾಜ್, ಆರ್.ಡಿ. ಪರಶುರಾಮ, ಎಚ್.ಎ. ಗಿರೀಶ್ ಇತರರಿದ್ದರು.
ತುಂತುರು ಮಳೆಯ ನಡುವೆಯೂ ಬಾಬಾ ದರ್ಶನಕ್ಕೆ ಬಂದ ಜನ ಸಾಗರ
ಬೆಳಗಿನಜಾವದಿಂದಲೇ ಆರಂಭಗೊಂಡ ತುಂತುರು ಮಳೆ ಬಾಬಾದರ್ಶನಕ್ಕೆ ಬರುವವರಿಗೆ ಕೊಂಚ ಅಡ್ಡಿಪಡಿಸಿತಾದರು, ಬಾಬಾ ದರ್ಶನಕ್ಕೆ ಭಕ್ತರ ಗುಂಪು ಬರುತ್ತಲೇ ಇತ್ತು. ಮಳೆ ನಿಂತಾಗ ಇದು ಇನ್ನೂ ಹೆಚ್ಚುತ್ತಿತ್ತು. ಈ ನಡುವೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಮಳೆಯಲ್ಲಿ ನೆನೆಯುವಂತಾಯಿತು. ಮಳೆ ನಡುವೆಯೂ ಭಕ್ತರು ಶ್ರೀ ಸಾಯಿ ಜಯ ಜಯ ಸಾಯಿ ಜಪ ಮಾಡುತ್ತಾ ಮುಂದೆ ಸಾಗಿ ಬಾಬಾ ಕೃಪೆಗೆ ಪಾತ್ರರಾದರು.