ಜು.15ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೃಹತ್ ಸಮ್ಮೇಳನ

ಸುದ್ದಿ360, ದಾವಣಗೆರೆ, ಜು.14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೃಹತ್ ಸಮ್ಮೇಳನವನ್ನು ಜು.15ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೂಟದ ರಾಜಾಧ್ಯಕ್ಷ ಆರ್.ಚಂದ್ರಶೇಖರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಸಾರಿಗೆ ಸಂಸ್ಥೆಗಳ ಅಭಿವೃದ್ಧಿ ಹಾಗೂ ನೌಕರರ ಹಿತಚಿಂತನಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಶಾಸಕ ಎಸ್.ಎ.ರವೀಂದ್ರನಾಥ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ಬಿ.ಶ್ರೀ ರಾಮುಲು, ಸಂಸದ ಡಾ.ಜಿ.ಎಮ್.ಸಿದ್ದೇಶ್ವರ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಕೆ.ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಎಸ್.ರಾಮಪ್ಪ, ಸಿ.ಎಸ್.ಷಡಾಕ್ಷರಿ ಸೇರಿದಂತೆ ಇತರೆ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಸಾರಿಗೆ ನೌಕರರ ಮುಖ್ಯ ಬೇಡಿಕೆಗಳಾದ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು. ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ 4 ವರ್ಷಗಳಿಗೊಮ್ಮೆ ನಡೆಯುವ ಅವೈಜ್ಞಾನಿಕ ವೇತನ ಪರಿಷ್ಕರಣೆ ಪದ್ಧತಿಯನ್ನು ಕೈಬಿಟ್ಟು ಸರ್ಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಭಂದನೆಗಳನ್ನು ವಿಧಿಸದೆ ಈ ಕೂಡಲೇ ಪುನರ್‌ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೇ ನಿಭಂದನೆಗಳಿಲ್ಲದೆ ರದ್ದು ಮಾಡಿ, ಏ.6,2021ರ ಪೂರ್ವದ ಯಥಾ ಸ್ಥಿತಿಯನ್ನು ಕಾಪಾಡಬೇಕು. ಮುಷ್ಕರದ ಸಮಯದಲ್ಲಿ 4 ನಿಗಮಗಳ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣಿಯನ್ನು ನಡೆಸಬೇಕೆಂದು ನಿಗಮವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕೆ.ತಿಪ್ಪೇಸ್ವಾಮಿ, ಎಸ್.ಓಂಕಾರಪ್ಪ, ಹೆಚ್.ಅಂಜಿನಪ್ಪ, ಕೃಷ್ಣ ಮೂರ್ತಿ, ಗುರುಲಿಂಗಪ್ಪ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!