ಸೇವಾನಿರತರಿಗೆ ಲಾಭ ನಷ್ಟ ಲೆಕ್ಕಿಸದೆ ಸೂಕ್ತ ವೇತನ ನೀಡುವುದು ಸರ್ಕಾರದ ಹೊಣೆ: ಸಿರಿಗೆರೆಶ್ರೀ

ಸುದ್ದಿ 360, ದಾವಣಗೆರೆ, ಜು.15: ಸಾರಿಗೆ ನೌಕರರದು ಜವಾಬ್ದಾರಿಯುತ ಕೆಲಸವಾಗಿದ್ದು, ಸರ್ಕಾರವೂ ಸಹ ನೌಕರರನ್ನು ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು. ನೌಕರರನ್ನಾಗಿ ಪರಿಗಣಿಸದೆ ಸೇವಾ ಧುರೀಣರು ಎಂದು ಪರಿಗಣಿಸುವ ಮೂಲಕ ನಿಮ್ಮ ಸಂಕಷ್ಟವನ್ನು ಪರಿಹರಿಸಲು ಮುಂದಾಗಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಕರ್ನಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜ್ಯದ ಸಾರಿಗೆ ನಿಗಮಗಳಲ್ಲಿ 1.25 ಲಕ್ಷ ಉದ್ಯೋಗಿಗಳಿದ್ದಾರೆ. ಇವರು ನೌಕರಿ ಮಾಡುತ್ತಿಲ್ಲ, ಸೇವೆ ಮಾಡುತ್ತಿದ್ದಾರೆ. ಇವರ ಸೇವೆಗಾಗಿ ಲಾಭ – ನಷ್ಟ ಲೆಕ್ಕಿಸದೇ ಸೂಕ್ತ ವೇತನ ನೀಡುವುದು ಸರ್ಕಾರದ ಹೊಣೆ ಎಂದು ಶ್ರೀಗಳು ತಿಳಿಸಿದರು.

ನಿಮ್ಮ ಕಷ್ಟಗಳ ಬಗ್ಗೆ ಸರ್ಕಾರದ ಜೊತೆ ಮಾತನಾಡಲು ಯಾವುದೇ ಸಂಕೋಚ ಇಲ್ಲ. ಆದರೆ, ಸರ್ಕಾರದ ಬಳಿ ಸುಲಭವಾಗಿ ಕೆಲಸ ಆಗುವುದಿಲ್ಲ. ವೇತನದ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಸುಮಾರು ಎರಡು ಸಾವಿರ ಕೋಟಿ ರೂ.ಗಳ ಆರ್ಥಿಕ ಹೊರೆಯಾಗಬಹುದು. ಇದರ ಹೊರತಾಗಿಯೂ ಕೆಲ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬಹುದಾಗಿದ್ದು, ನೌಕರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೈ ಬಿಡಲು ಸರ್ಕಾರ ಮುಂದಾಗಬೇಕು. ಇದರಿಂದ ನೌಕರರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಸಾರಿಗೆ ನೌಕರರ ವಿಷಯ ಕಾನೂನು ಹೋರಾಟವಾಗಬಾರದು. ಮಾನವೀಯ ವಿಷಯದ ಮೇಲೆ ಕ್ರಮ ಆಗಬೇಕು. ನಿಮ್ಮ ಕಷ್ಟಗಳ ಬಗ್ಗೆ ಸರ್ಕಾರದ ಜೊತೆ ಮಾತನಾಡಲು ಮುಜುಗರ ಇಲ್ಲ. ಈ ಬಗ್ಗೆ ಸರ್ಕಾರದ ಅಧಿಕಾರಸ್ಥರ ಜೊತೆ ಖಾಸಗಿಯಾಗಿ ಮಾತನಾಡುತ್ತೇನೆ ಎಂದು ಶ್ರೀಗಳು ನೌಕರರಿಗೆ ಭರವಸೆ ನೀಡಿದರು.

ಜನಪ್ರತಿನಿಧಿಗಳ ಗೈರಿಗೆ ಧರ್ಮ ಸಂಕಟ ಕಾರಣವಾ.. ?

ನಮ್ಮ ನ್ಯಾಯ ಪೀಠದಲ್ಲಿ ಕೆಲ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಕೆಲವೊಮ್ಮೆ ಕೆಲವರು ಹಾಜರಾಗಲ್ಲ ಅಂದ ಮಾತ್ರಕ್ಕೆ ಅವರು ನಮಗೆ ಅಗೌರವ ತೋರಿದರೆಂದು ಪರಿಭಾವಿಸುವುದಿಲ್ಲ. ಅವರು ಬಂದು ತೀರ್ಪಿನಂತೆ ನಡೆದುಕೊಳ್ಳಲಾಗದಿದ್ದರೆ ಎಂಬ ಆತಂಕದಿಂದ, ಧರ್ಮಸಂಕಟದಿಂದ ಹಲವರು ಭಾಗಿಯಾಗೋದಿಲ್ಲ. ನಂತರ ಅವರನ್ನು ಪ್ರತ್ಯೇಕವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸಂವಾದ ಮಾಡಿ ಪ್ರಕರಣವನ್ನು ಇತ್ಯರ್ಥ ಪಡಿಸುವ ಪ್ರಯತ್ನ ಮಾಡುತ್ತೇವೆ.

ಇಂದು ಅನೇಕ ಜನಪ್ರತಿನಿಧಿಗಳು ಹಾಜರಾಗಿಲ್ಲ. ಅವರಿಗೆ ರಾಜ್ಯದ ಅನೇಕ ಜವಾಬ್ದಾರಿಯುತ ಕೆಲಸಗಳು ಕಾರಣವಿರಬಹುದು. ನಾವು ಖಾಸಗಿಯಾಗಿ ಅವರನ್ನು ಸಂಧಿಸಿ ನಿಮ್ಮ ಬವಣೆಯನ್ನು ಇತ್ಯರ್ಥಪಡಿಸುವ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಶ್ರೀಗಳು ಹೇಳಿದರು.

ಪ್ರಸ್ತವಿಕ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್, ರಾಜ್ಯದ ಸುಮಾರು ಒಂದು ಲಕ್ಷ  ಇಪ್ಪತ್ತೈದು ಸಾವಿರ ನೌಕರರು ದಿನ ನಿತ್ಯ ಸರಿ ಸುಮಾರು 1 ಕೋಟಿ ಜನರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇತರೆ ಸರ್ಕಾರಿ ಮತ್ತು ನಿಗಮ ಮಂಡಳಿಗಳ ನೌಕರರಿಗೆ ಹೋಲಿಸಿದರೆ ನಮಗೆ ನೀಡುತ್ತಿರುವ ವೇತನ ಶೇ.30 ರಿಂದ ಶೇ.40 ವ್ಯತ್ಯಾಸವಿದೆ. ಈ ಮಲತಾಯಿ ಧೋರಣೆಯನ್ನು ಹೋಗಲಾಡಿಸಬೇಕು.

ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಭಂದನೆರಹಿತವಾಗಿ ಈ ಕೂಡಲೇ ಪುನರ್‌ ನೇಮಕ ಮಾಡಿಕೊಳ್ಳಬೇಕು. ಜೊತೆಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೇ ನಿಭಂದನೆಗಳಿಲ್ಲದೆ ರದ್ದು ಮಾಡಿ, ಏ.6,2021ರ ಪೂರ್ವದ ಯಥಾ ಸ್ಥಿತಿಯನ್ನು ಕಾಪಾಡಬೇಕು. ಮುಷ್ಕರದ ಸಮಯದಲ್ಲಿ 4 ನಿಗಮಗಳ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣಿಯನ್ನು ನಡೆಸಬೇಕೆಂದು ಒತ್ತಾಯಿಸಿದರು.

ಇಡೀ ದೇಶದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆ . ಇದಕ್ಕೆಲ್ಲಾ ಸಂಸ್ಥೆಯ ನೌಕರರೇ ಕಾರಣೀಭೂತರಾಗಿದ್ದು, ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ಷಮತೆಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಶಾಸಕ ಎಸ್.ವಿ.ರಾಮಚಂದ್ರ ಸೇರಿದಂತೆ ಹೈಕೋರ್ಟ್ ವಕೀಲರಾದ ಪಿ.ಹೆಚ್. ನೀರಲಕೇರಿ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಹಿರೇಮಠ್, ಹೈಕೋರ್ಟ್ ವಕೀಲರಾದ ಜಗದೀಶ್ ಎಲ್, ನೌಕರರ ಬವಣೆಯನ್ನು ವೇದಿಕೆಯಲ್ಲಿ ಶ್ರೀಗಳಿಗೆ ವಿವರಿಸಿದರು. ಮತ್ತು ಸರ್ಕಾರದ ಜೊತೆ ಮಾತನಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಮಹಿಳಾ ರಾಜ್ಯಾಧ್ಯಕ್ಷರಾದ ಚಂಪಕಾವತಿ, ರಾಜ್ಯ ಖಜಾಂಚಿ ಸತೀಶ್ ಎನ್.,  ಪ್ರಧಾನ ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ ಇತರರು ಇದ್ದರು. ಸಮ್ಮೇಳನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!