ಸುದ್ದಿ360, ದಾವಣಗೆರೆ, ಜು.15: ಜಲಸಿರಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿ, ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಲೋಕಸಭಾ ಸದಸ್ಯ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು.
ಶುಕ್ರವಾರ ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿರಂತರ ನೀರು ಸರಬರಾಜು ಕಾಮಗಾರಿಯ ಪ್ರಗತಿ ಪರಿಶೀಲನಾ ಹಾಗೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನೀರು ಸರಬರಾಜು ಹಾಗೂ 24*7 ನೀರು ಸರಬರಾಜು ಕಾಮಗಾರಿಯನ್ನು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪೂರ್ಣಗೊಳಿಸಬೇಕು. ನಗರದಾದ್ಯಂತ ವಿವಿಧ ಬಡಾವಣೆಗಳಲ್ಲಿ ರಸ್ತೆಯ ಗುಂಡಿಯನ್ನು ತೆಗೆದು ಪೈಪ್ ಲೈನ್ ಅಳವಡಿಸಿ ನಿರ್ಲಕ್ಷ್ಯ ಮಾಡದೆ ಆ ರಸ್ತೆಗಳನ್ನು ಮರು ಕಾಂಕ್ರೀಟೀಕರಣ ಮಾಡಿ ದುರಸ್ಥಿ ಮಾಡಬೇಕು. ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ನಗರದ ಎಲ್ಲಾ ಬಡಾವಣೆಯ ನಿವಾಸಿಗಳಿಗೆ ಜಲಸಿರಿ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದರು.
ಗುತ್ತಿಗೆದಾರರು ಮಾತನಾಡಿ, 83 ಕೋಟಿ ವೆಚ್ಚದ ಬೃಹತ್ ನೀರು ಪೂರೈಕೆ ಯೋಜನೆಯಲ್ಲಿ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಶೇ.5 ರಷ್ಟು ಕಾಮಗಾರಿಯನ್ನು ಪ್ರಸ್ತುತ ವರ್ಷದ ನವೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.
472 ಕೋಟಿ ವೆಚ್ಚದ 24*7 ನಿರಂತರ ನೀರು ಸರಬರಾಜು ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಯಡಿ 1340 ಕಿ.ಮೀ ಪೈಪ್ ಲೈನ್ ಹಾಕಬೇಕಾಗಿದೆ, ಅದರಲ್ಲಿ 1057 ಕಿಮೀ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, 283 ಕಿ.ಮೀ ಪೈಪ್ ಲೈನ್ ಕಾಮಗಾರಿ ಬಾಕಿ ಇದೆ. 19 ಓವರ್ ಹೆಡ್ ಟ್ಯಾಂಕ್ ಗಳಲ್ಲಿ 13 ಟ್ಯಾಂಕ್‍ಗಳು ಪೂರ್ಣಗೊಂಡಿದ್ದು, ಉಳಿದ ಟ್ಯಾಂಕ್‍ಗಳು ಕೆಲಸ ಪ್ರಗತಿಯಲ್ಲಿದೆ. ಒಟ್ಟಾರೆ 97589 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕಾಗಿದ್ದು, ಅದರಲ್ಲಿ 47328 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಬಾಕಿ ಉಳಿದ ಎಲ್ಲಾ ಮನೆಗಳಿಗೂ ಸಂಪರ್ಕ ಕಲ್ಪಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್, ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕರಾದ ದೀಪ, ಇಂಜಿನಿಯರ್ ಕ್ಯಾಪ್ಟನ್ ದೊಡ್ಡಿಹಾಳ್ ಹಾಗೂ ಮಂಜುನಾಥ, .ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.