ಆರೋಪಗಳಿಗೆ ಸಮರ್ಪಕ ಉತ್ತರ ನೀಡದ ಆಡಳಿತ ಪಕ್ಷ : ಎ. ನಾಗರಾಜ್
ಸುದ್ದಿ360, ದಾವಣಗೆರೆ, ಜು.16: ವಾರ್ಡ್ ನ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವುದು ತಪ್ಪಾ? ನಮ್ಮನ್ನು ಆರಿಸಿ ಕಳಿಸಿದವರ ಒಳಿತಿಗಾಗಿ ನಾವು ವಾಚ್ ಮನ್ ಆಗಿಯೂ ಕೆಲಸ ಮಾಡುತ್ತೇವೆ. ಭ್ರಾಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ತಡೆಯೊಡ್ಡಲು ನಾವು ಕಾವಲುಗಾರರೇ ಹೌದು ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಗುಡುಗಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪಕ್ಷದವರು ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿರುವ ಮೇಯರ್ ಜಯಮ್ಮ ಗೋಪಿನಾಯ್ಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರಿಗೋಸ್ಕರ ವಾಚ್ ಮನ್ ಆಗಿಯೂ ಕೆಲಸ ಮಾಡಲು ನಾವು ಸಿದ್ಧ. ಜಯಮ್ಮ ಗೋಪಿನಾಯ್ಕ ಅವರು ಮೇಯರ್ ಆಗಿ ಐದು ತಿಂಗಳಾಗಿವೆ. ಈ ವೇಳೆಯಲ್ಲಿ ಯಾವ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲಿ, ಅದನ್ನು ಬಿಟ್ಟು ವಿಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಸರಿಯಲ್ಲ. ಪಾಲಿಕೆ ಆಡಳಿತದಲ್ಲಿ ಮೇಯರ್ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದು ಆರೋಪಿಸಿದರು.
ಕುಲ್ಲಕ ರಾಜಕಾರಣ ಮಾಡುವ ಅವಶ್ಯಕತೆ ನಮಗೆ ಇಲ್ಲ ನೂರುಬಾರಿ ಸುಳ್ಳು ಹೇಳಿಯೇ ಅದನ್ನು ಸತ್ಯ ಮಾಡಲು ಯತ್ನಿಸುವುದು- ಬಿಜೆಪಿಯವರ ಜಾಯಮಾನ. ಪಾಲಿಕೆಯ ದುರಾಡಳಿತ, ದಿವಾಳಿತನದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಇದರ ಪ್ರಸ್ತಾಪ ಮಾಡಬಾರದೇ ಎಂದು ಕಿಡಿಕಾರಿದರು.
ಅನುದಾನ ಇದೆ ಎಂದು ಹೇಳಿಕೊಳ್ಳುವ ಬಿಜೆಪಿಯವರು ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಈಗ ರಾಜ್ಯ ಹಣಕಾಸು ನಿಧಿಯಲ್ಲಿ 25 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎನ್ನುತ್ತಾರೆ. ನಗರಾಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವರ ಇಲಾಖೆಯಿಂದ ಹೆಚ್ಚಿನ ಅನುದಾನ ತರಲು ಇವರಿಗೆ ಸಾಧ್ಯವಾಗಿಲ್ಲ ಎಂದರೆ ಬಿಜೆಪಿ ಯಾವ ಮಟ್ಟಿಗೆ ಅಧಿಕಾರ ನಡೆಸುತ್ತಿದೆ ಎಂಬುದು ಗೊತ್ತಾಗುತ್ತದೆ.
ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳ ಸಾಮ್ರಾಜ್ಯ ಇದೆ. ಜನರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಏನೇ ಕೇಳಿದರೂ ಟೆಂಡರ್ ಕರೆದಿದ್ದೇವೆ. ಇಂದಿರಾ ಕ್ಯಾಂಟೀನ್ ಮುಚ್ಚಿ ಎರಡೂವರೆ ತಿಂಗಳಾಗಿವೆ. ಏನು ಕೇಳಿದರೂ ಇನ್ನು ಸ್ವಲ್ಪ ದಿನಗಳಲ್ಲಿ ಮಾಡುತ್ತೇವೆ ಎಂಬ ಸಿದ್ದ ಉತ್ತರ ಬಿಟ್ಟರೆ ಕೆಲಸವಂತೂ ಆಗುತ್ತಿಲ್ಲ. ವಿಪಕ್ಷದವರ ಆರೋಪಕ್ಕೆ ಸಮರ್ಪಕ ಉತ್ತರ ನೀಡದೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಈಗ ನಿಯೋಗ ಹೋಗಿ ಅನುದಾನ ಬರುವುದು ಯಾವಾಗ ?
ಎರಡು ವರ್ಷದಲ್ಲಿ ಯಾವ್ಯಾವ ಕಾಮಗಾರಿಗಳಿಗೆ, ಪಾಲಿಕೆ ಅಭಿವೃದ್ಧಿಗೆ ನಗರಾಭಿವೃದ್ಧಿಇಲಾಖೆಯಿಂದ ಎಷ್ಟು ಹಣ ಬಂದಿದೆ ತಿಳಿಸಲಿ. ಈಗ ನಿಯೋಗ ಹೋಗುತ್ತೇವೆ, ಹಣ ಕೇಳುತ್ತವೆ ಎಂದರೆ, ಇಷ್ಟು ದಿನ ಏನು ಮಾಡುತ್ತಿದ್ದರು. ಇನ್ನು ಚುನಾವಣೆಗೆ ಎಂಟು ತಿಂಗಳು ಮಾತ್ರ ಬಾಕಿ ಇದೆ. ಇನ್ನು ನಿಯೋಗ ಹೋಗಿ ಅನುದಾನ ಬರುವದು ಯಾವಾಗ, ಅಭಿವೃದ್ಧಿಯ ಮಾತು ಮರೀಚಿಕೆಯೇ ಸರಿ ಎಂದು ಮಾಜಿ ವಿಪಕ್ಷ ನಾಯಕ ಎ. ನಾಗರಾಜ್ ದೂರಿದರು.
ಇನ್ನು ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿರುವ ರಾಕೇಶ್ ಜಾಧವ್ ಅವರಿಗೆ ಅನುಭವವಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಅನುದಾನ ನೀಡೋಲ್ಲ ಅನ್ನೋಕೆ ಇವರು ಯಾರು? ಏನು ಮಾತನಾಡುತ್ತೇನೆ ಎಂಬ ಅರಿವಿಲ್ಲ. ದುರಾಳಿಡತ ತಡೆಯುವುದಕ್ಕೆ ನಾವುಗಳು ವಾಚ್‌ಮನ್‌ಗಳು ಆಗಲು ಸಿದ್ಧರಿದ್ದೇವೆ ಎಂದರು.
ಒಂದೆರಡು ಕಡೆಗಳಲ್ಲಿ ಮೇಯರ್ ಭೇಟಿ ನೀಡಿದರೆ ಆಯ್ತಾ? ನಮ್ಮ ವಾರ್ಡ್ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದರೂ ಪರಿಹರಿಸಲು ಪ್ರಯತ್ನಿಸುತ್ತಿಲ್ಲ. ಮೇಯರ್ ಎಮ್ ಸಿಸಿ ಬಿ ಬ್ಲಾಕಿಗೆ ಬಂದು 15 ದಿನದಲ್ಲಿ ಯುಜಿಡಿ ಹಾಗೂ ರಸ್ತೆ ಕಾಮಗಾರಿಯನ್ನು ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಈಗ ಸ್ಥಳೀಯ ನಾಗರೀಕರು ದೂರವಾಣಿ ಕರೆ ಮಾಡಿದರೆ ‘ನೀವು ಪದೇ ಪದೇ ಪೋನ್ ಮಾಡಬೇಡಿ, ನಿಮ್ಮ ಪಾಲಿಕೆ ಸದಸ್ಯರನ್ನೇ ಕೇಳಿ’ ಎಂಬ ಹಾರಿಕೆಯ ಉತ್ತರ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಪಾಲಿಕೆ ಕಾಂಗ್ರೆಸ್ ನಾಯಕರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ಸೈಯದ್ ಚಾರ್ಲಿ, ಹುಲ್ಲುಮನಿ ಗಣೇಶ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಉಮೇಶ್ ಇದ್ದರು.