ಅಗತ್ಯ ವಸ್ತುಗಳ ಬೆಲೆ ಏರಿಕೆ: ಸೌದೆ ಒಲೆ ಹೊತ್ತಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ

ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್ಟಿ ಹೇರಿಕೆಗೆ ಗುಡುಗಿದ ಮಹಿಳಾಮಣಿಯರು

ಸುದ್ದಿ360, ದಾವಣಗೆರೆ, ಜು.19: ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಆಹಾರ ಧಾನ್ಯ ಮತ್ತು ಮೊಸರು ಸೇರಿದಂತೆ ಜನಸಾಮಾನ್ಯರು ದಿನನಿತ್ಯ ಬಳಸುವ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ರಿಂಗ್ ರಸ್ತೆಯ ಕ್ಲಾಕ್ ಟವರ್ ಬಳಿ ಇರುವ ಸೈನಿಕ ಉದ್ಯಾನವನದ  ಎದುರಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ ನೇತೃತ್ವದಲ್ಲಿ ಒಟ್ಟುಗೂಡಿದ ಮಹಿಳಾ ಕಾಂಗ್ರೆಸ್ ಸದಸ್ಯರು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸುವ ಮತ್ತು ಜಿಎಸ್ ಟಿ ವಿರೋಧಿ ಪ್ಲೆಕ್ ಕಾರ್ಡ್ ಗಳನ್ನು ಹಿಡಿದು ಘೋಷಣೆ ಕೂಗುತ್ತಾ ಕ್ಲಾಕ್ ವೃತ್ತ ತಲುಪಿದರು.

ಕ್ಲಾಕ್ ವೃತ್ತದಲ್ಲಿ ಸಿಲಿಂಡರ್, ಅಕ್ಕಿ, ಗೋಧಿ,  ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್ ಗಳನ್ನು ಪ್ರದರ್ಶಿಸಿದರು. ಕೆಲ ಸದಸ್ಯರು ಟೊಮೊಟೊ, ಬದನೆ, ಈರುಳ್ಳಿ ಹೀಗೆ ವಿವಿಧ ತರಕಾರಿಗಳ ಮಾಲೆಯನ್ನು ಧರಿಸಿದ್ದರು. ಕಟ್ಟಿಗೆ ಒಲೆಯನ್ನು ಹತ್ತಿಸುವ ಮೂಲಕ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಅಣುಕು ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷರಾದ ಪುಷ್ಪ ಅಮರನಾಥ್ ಮಾತನಾಡಿ, ಬಿಜೆಪಿ ತಿನ್ನುವ ಅನ್ನದ ಮೇಲೂ ಟ್ಯಾಕ್ಸ್ ಹಾಕಿ  ಬಡವರ ಹೊಟ್ಟೆ ಮೇಲೆ ಹೊಡಿಯೋ ಕೆಲಸ ಮಾಡ್ತಾ ಇದೆ. ಇಂದು ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ, ಕಾರ್ಮಿಕ  ವಿರೋಧಿ, ಯುವಕರ ವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಸಾರ್ವಜನಿಕರ ಜೀವನ ನಿರ್ವಹಣೆಯನ್ನು ದುಸ್ತರ ಮಾಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪುಷ್ಪಅವರು ಕಾಲಿ ಸಿಲಿಂಡರ್ ನ್ನು ಎತ್ತಿ ಹಿಡಿದು ದರ ಏರಿಕೆಯನ್ನು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ, ಶುಭಮಂಗಳ, ರಾಜೇಶ್ವರಿ, ಸುಷ್ಮಾ ಪಾಟಿಲ್, ಆಶಾ ಮುರುಳಿ, ಗೀತಾ ಚಂದ್ರಶೇಖರ್, ಸಲ್ಮಾಭಾನು, ಮುಂಜುಳಮ್ಮ, ಮಂಗಳಮ್ಮ, ಮಂಜಮ್ಮ, ಸುಧಾ ಇಟ್ಟಿಗುಡಿ, ಅಶ್ವಿನಿ ಪ್ರಶಾಂತ್, ದ್ರಾಕ್ಷಾಯಣಮ್ಮ, ರುದ್ರಮ್ಮ ಸೇರಿದಂತೆ ಜಿಲ್ಲೆಯ ವಿವಿಧ ಬ್ಲಾಕ್ ಗಳ  ಕಾಂಗ್ರೆಸ್ ಮಹಿಳಾ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Comment

error: Content is protected !!