ಸುದ್ದಿ360, ದಾವಣಗೆರೆ, ಜು.19: ಔಷಧ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇರುವ ಎಸ್.ಪಿ.ಇ. ಕಾಯಿದೆಯನ್ನ ಜಾರಿಗೊಳಿಸದೇ ಔಷಧ ತಯಾರಕ ಕಂಪನಿಗಳು ಪ್ರತಿನಿಧಿಗಳನ್ನ ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ದಾವಣಗೆರೆ ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಔಷಧ ಮಾರಾಟಗಾರರು ನಂತರ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೇಂದ್ರದ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ನಮ್ಮ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸರ್ಕಾರಗಳ ಗಮನಕ್ಕೆ ತಂದರೂ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮಗಳನ್ನ ತೆಗೆದುಕೊಂಡಿಲ್ಲ. ಕಾರಣ ದೇಶಾದ್ಯಂತ ವಂಚನೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ಹೆಚ್. ಆನಂದರಾಜ್, ಔಷಧ ತಯಾರಕ ಕಂಪನಿಗಳು ದೇಶದ ಸಂವಿಧಾನದ ಆಶಯಗಳನ್ನ ಧಿಕ್ಕರಿಸಿವೆ. ಬಹುರಾಷ್ಟ್ರೀಯ ಕಂಪನಿಗಳು ಫ್ರ್ಯಾಂಚೈಸ್ ಮಾರ್ಕೆಟಿಂಗ್ ಮೂಲಕ ಮಾರಾಟ ಪ್ರಚಾರ ಕಾರ್ಯದ ದೀರ್ಘಕಾಲಿಕ ಸ್ವರೂಪವನ್ನು ಬದಲಿಸುವ ಗುರಿಯನ್ನು ಹೊಂದಿವೆ. ಅಸ್ತಿತ್ವದಲ್ಲಿರುವ ಸೇವಾ ಷರತ್ತುಗಳನ್ನು ಅತಿರೇಕವಾಗಿ ಉಲ್ಲಂಘಿಸುತ್ತಿರುವ ಔಷಧ ಉದ್ಯಮದಲ್ಲಿ ಕಂಪನಿಗಳ ವಿಲೀನದ ಅನೇಕ ಘಟನೆಗಳು ಸಂಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಹಣಕಾಸು ಸಂಸ್ಥೆಗಳು ಖರೀದಿ ಭರಾಟೆಯಲ್ಲಿವೆ. ಅಲ್ಲದೇ ಹಲವಾರು ಔಷಧ ಕಂಪನಿಗಳ ಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿವೆ. ಇದರಿಂದ ದೇಶದ ಜನಕ್ಕೆ ಅಪಾಯವಿದೆ ಎನ್ನುವ ತಿಳುವಳಿಕೆ ಕೇಂದ್ರ ಸರ್ಕಾರಕ್ಕೆ ಇದ್ದರೂ ಮೂಕ ಪ್ರೇಕ್ಷಕನಾಗಿದೆ ಎಂದು ದೂರಿದರು.
ರಾಜ್ಯ ಕಾರ್ಯದರ್ಶಿ ಎ.ವೆಂಕಟೇಶ ಮಾತನಾಡಿ, ಭಾರತ್ ಸೀರಮ್ ನಿಂದ ಟಿ.ಟಿ.ಕೆ. ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಂಡ ನಂತರ, ಹೊಸ ಕಂಪನಿಯಲ್ಲಿ ಉದ್ಯೋಗ ಪಡೆದ ಔಷಧ ಮಾರಾಟ ಪ್ರತಿನಿಧಿಗಳಿಗೆ ಕಾರ್ಮಿಕ ವಿರೋಧಿ ಸೇವಾ ಷರತ್ತುಗಳನ್ನು ಸ್ವೀಕರಿಸಲು ಒತ್ತಾಯಿಸಲಾಗಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯ ಮಾರಾಟ ಪ್ರತಿನಿಧಿಗಳನ್ನು ಸಾಮಾಜಿಕ ನ್ಯಾಯವನ್ನ ಕೊಡದೇ ದೇಶದ ಕಾನೂನುಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಕೆಲಸದಿಂದ ವಜಾಗೊಳಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಾವೀರ್, ಪ್ರದೀಪ್, ಶ್ರೀಧರ್, ರುದ್ರೇಶ್, ವಿಠಲ್, ಶಶಿ ಕುಮಾರ, ಶ್ರೀನಿವಾಸ್ ಮೂರ್ತಿ ಇತರರು ಇದ್ದರು.