ಸುದ್ದಿ360,ಮೈಸೂರು, ಜುಲೈ 20: ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆಮಾಡಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಕಬಿನಿ ಜಲಾಶಯದ ಉದ್ಯಾನವನವನ್ನು ಸರ್ಕಾರ ಮಾಡಬೇಕೋ ಅಥವಾ ಪಿಪಿಪಿ ಮಾದರಿಯಲ್ಲಿ ಮಾಡಬೇಕೋ ಎಂಬ ಗೊಂದಲದಲ್ಲಿದೆ. ಗೊಂದಲ ವನ್ನು ಆದಷ್ಟು ಬೇಗನೇ ನಿವಾರಿಸಿ ಕಾಮವಾರಿಯನ್ನು ಕೈಗೊಳ್ಳಲಾಗುವುದು ಎಂದರು.
ಹೆಚ್.ಡಿ.ಕೋಟೆಗೆ ವಿಶೇಷ ಕಾರ್ಯಕ್ರಮ
ಹೆಚ್.ಡಿ.ಕೋಟೆ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಶಿಕ್ಷಣ ವಲಯದಲ್ಲಿ ಅತಿ ಹೆಚ್ಚಿನ ಶಾಲಾ ಕಟ್ಟಡಗಳ ನಿರ್ಮಾಣ, ಪಿ ಹೆಚ್ ಸಿ ಕೇಂದ್ರಗಳನ್ನು ಸಿ.ಹೆಚ್.ಸಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಾಸಕರಿಗೆ ರಸ್ತೆ, ಮನೆಗಳ ನಿರ್ಮಾಣ ಕ್ಕೆ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಅವುಗಳ ಬಗ್ಗೆ ಗಮನ ಹರಿಸಿ ಬಿದ್ದುಹೋಗಿರುವ ಮನೆಗಳಿಗೆ ಗೊಂದಲ ನಿವಾರಿಸಿ, ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ ಎಂದರು.