ಸುದ್ದಿ360, ವಿಜಯನಗರ, ಜು.21: ಜಮೀನು ಖರೀದಿಸುವ ಆಮಿಷ ತೋರಿದ ದುಷ್ಕರ್ಮಿಗಳು ವಿಜಯನಗರ ಜಿಲ್ಲೆಯ ಕೊಟ್ಟೂರಿನ ರಿಯಲ್ ಎಸ್ಟೇಟ್ ಏಜೆಂಟ್ ಟಿ. ಹಾಲೇಶ್ ಎಂಬುವರನ್ನ ಅಪಹರಿಸಿ, 20 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ.
ಅಪಹರಣಕಾರರು ಶಿವಮೊಗ್ಗ ಮೂಲದವರು ಎನ್ನಲಾಗಿದೆ. ಹಾಲೇಶ್ ಅವರು ಕೆಲಸ ಮಾಡುವ ಸ್ಥಳದಿಂದ ಸೈಟ್ ನೋಡುವ ಸಲುವಾಗಿ ಇಬ್ಬರು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರಿಗೆ ಇನ್ನಿಬ್ಬರು ಕಾರಿನಲ್ಲಿ ಜೊತೆಯಾಗಿದ್ದಾರೆ. ಹಾಲೇಶ್ ರನ್ನು ಹರಿಹರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹಾಲೇಶ್ ಅವರಿಗೆ ಜೀವ ಬೆದರಿಕೆ ಹಾಕಿ, ಹಾಲೇಶ್ ರನ್ನು ಬಿಡಲು ಅವರ ಸಂಬಂಧಿಕರಲ್ಲಿ 80 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ 20 ಲಕ್ಷ ರೂ. ಕೊಡುವುದಾಗಿ ಹಾಲೇಶ್ ಹೇಳಿದ ನಂತರ ಕಾರಲ್ಲಿ ಕೊಟ್ಟೂರಿಗೆ ಕರೆದುಕೊಂಡು ಬಂದು ಸಂಬಂಧಿಕರಿಂದ 20 ಲಕ್ಷ ರೂ. ಪಡೆದು ರಾತ್ರಿ 9ರ ಸುಮಾರಿಗೆ ತುಂಗಭದ್ರಾ ಬಿಪಿಎಡ್ ಕಾಲೇಜು ಮೈದಾನದಲ್ಲಿ ಹಾಲೇಶ್ ರನ್ನು ಬಿಟ್ಟು ಹೋಗಿದ್ದಾರೆ. ಬಳಿಕ ನೇರ ಕೊಟ್ಟೂರು ಪೊಲೀಸ್ ಠಾಣೆಗೆ ತೆರಳಿದ ಹಾಲೇಶ್ ಅವರು ದೂರು ನೀಡಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಹಾಲೇಶ್ ಅವರನ್ನು ಅಪಹರಿಸಿ 20 ಲಕ್ಷ ರೂ. ಪಡೆದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.