ಸುದ್ದಿ360, ಶಿವಮೊಗ್ಗ, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಜನರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮೂರ್ತಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಇದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದು, ಇದರ ಜೊತೆಗೆ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ.
ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ವಿಜಯೇಂದ್ರ ಅವರು ಕೂಡ ತಾಲೂಕಿನಾದ್ಯಂತ ಓಡಾಡಿ, ನಿಮ್ಮೆಲ್ಲರ ಅಪೇಕ್ಷೆಯಂತೆ ತಾಲೂಕಿನಲ್ಲಿ ಸಂಘಟನೆ ಮಾಡಲಿದ್ದಾರೆ ಎಂದು ಹೇಳುವ ಮೂಲಕ ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸುವ ಸುಳಿವು ನಿಶ್ಚಳವಾಗಿದೆ.
ಇದೇ ವೇದಿಕೆಯಲ್ಲಿ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ತಂದೆಯವರಿಗೆ ನೀವು ಕೊಟ್ಟ ಆಶೀರ್ವಾದದಂತೆಯೇ ನನಗೂ ಆಶೀರ್ವಾದ ಬೆಂಬಲ ನೀಡುವಂತೆ ಕೋರಿದ್ದಾರೆ.