ದಾವಣಗೆರೆ, ಜೂ.13: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ ಆರೋಪಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಕೇಂದ್ರ ಸರಕಾರ, ನೆಹರು ಕುಟುಂಬದ ವಿರುದ್ಧ ಇ.ಡಿ, ಐಟಿ ದಾಳಿ ಮಾಡಿಸುವ ಮೂಲಕ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ನೆಹರು ಕುಟುಂಬದ ವಿರುದ್ಧ ಹಗೆ ಸಾಧಿಸುತ್ತಿರುವ ಕೇಂದ್ರ ಸರಕಾರ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ ಮೂಲಕ ಸಮನ್ಸ್ ಜಾರಿಗೊಳಿಸಿದೆ. ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಅಂಗ ಸಂಸ್ಥೆಗಳಂತೆ ಬಳಸಿಕೊಳ್ಳುತ್ತಿರುವುದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯಲ್ಲಿರುವವರೆಲ್ಲರೂ ಸತ್ಯ ಹರಿಶ್ಚಂದ್ರನ ವಂಶಸ್ಥರೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಆರಂಭಗೊಂಡ ದೇಶದ ಸರಕಾರಿ ಸ್ವಾಮ್ಯದ ದೊಡ್ಡ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಾ ಬಂದಿರುವ ಬಿಜೆಪಿ, ಏರ್ಪೋರ್ಟ್ಗಳನ್ನೂ ಕಾರ್ಪೊರೇಟ್ ಸಂಸ್ಥೆಗಳಿಗೆ ಬರೆದುಕೊಟ್ಟಿದೆ. ಮುಂಬೈಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಇದೀಗ ಅಂಬಾನಿ ವಿಮಾನ ನಿಲ್ದಾಣವಾಗಿದೆ. ಮಂಗಳೂರಿನ ವಿಮಾನಿನಿಲ್ದಾಣ ಅದಾನಿ ವಿಮಾನದ ನಿಲ್ದಾಣವಾಗಿದೆ ಎಂದು ಬಸವರಾಜ್ ಆರೋಪಿಸಿದರು.
ಕಾಂಗ್ರೆಸ್ನಲ್ಲಿ ನೆಹರು ಮನೆತನದವರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಪದೇ ಪದೆ ಕೇಳಿಬರುತ್ತದೆ. ಆದರೆ, ಈ ಕುಟುಂಬದ ಐದು ತಲೆಮಾರಿನ ನಾಯಕರು ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಪ್ರಧಾನಿಯಾಗುವ ಅವಕಾಶ ಒದಗಿ ಬಂದರೂ ಅದನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಡುವ ಮೂಲಕ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದಾರೆ. ಆ ಮೂಲಕ ತಮಗೆ ಅಧಿಕಾರದ ಆಸೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಲ್ಲಾ ಅಧಿಕಾರ ಅನುಭವಿಸಿ ದೇವನಹಳ್ಳಿ ಕ್ಷೇತ್ರದ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಿರುವ ಛಲವಾದಿ ನಾರಾಯಣಸ್ವಾಮಿ ಅವರನ್ನು ಬಿಜೆಪಿ ತನ್ನ ಚಡ್ಡಿ ಹೊರುವ ಕೆಲಸಕ್ಕೆ ಇರಿಸಿಕೊಂಡಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಗಂಭೀರ ಆರೋಪ ಮಾಡಿದರು. ಕೊಳಕು ಚಡ್ಡಿಗಳನ್ನು ಹೊತ್ತು, ಮನುವಾದ ಜೀವಂತವಾಗಿಡಲು ಹೊರಟಿರುವ ನಾರಾಯಣ ಸ್ವಾಮಿಗೆ ಸಿದ್ದರಾಮಯ್ಯರ ವಿರುದ್ಧ ಹೋರಾಟ ಮಾಡಲು ನೈತಿಕತೆ ಇಲ್ಲ ಎಂದರು.
ಆಡಳಿತ ಪಕ್ಷವೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಕೋಮುಗಲಭೆಗೆ ಕುಮ್ಮಕ್ಕು ನೀಡುವ ಸಂಘಟನೆಗಳು ರಾಜ್ಯದಲ್ಲಿ ಏನೇ ಹೇಳಿಕೆ ನೀಡಿದರೂ ಸಿಎಂ ಸೇರಿದಂತೆ ಯಾವುದೇ ಮಂತ್ರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಖತ್ ಅಲಿ, ಶಿವಕುಮಾರ್, ಫಾರೂಖ್ ಮುಬಾರಕ್ ಇದ್ದರು.