ಸುದ್ದಿ360 ಕೊಪ್ಪಳ ಜು.24: ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತಪಟ್ಟ ಐದೂ ಜನ ಒಂದೇ ಕುಟುಂಬದವರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 7 ವರ್ಷದ ಪುಟ್ಟರಾಜು ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸ್ಕಾರ್ಪಿಯೊ ವಾಹನದಲ್ಲಿದ್ದ ಒಟ್ಟು ಒಂಬತ್ತು ಜನರ ಪೈಕಿ ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪಲ್ಲವಿ (28), ಪುಟ್ಟರಾಜು (7), ಚಾಲಕ ಹರ್ಷವರ್ಧನ (35) ಹಾಗೂ ಭೂಮಿಕಾ (5) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಪುಟ್ಟರಾಜು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ವಾಹನದಲ್ಲಿ ಸಿಲುಕಿದ್ದ ಐದು ಜನರ ಮೃತದೇಹಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೆಲವರ ಕೈ ಹಾಗೂ ಕಾಲುಗಳು ವಾಹನಗಳ ಒಳಗೆ ಸಿಲುಕಿದ್ದವು. ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿದ ಬಳಿಕ ಮೃತದೇಹಗಳನ್ನು ಹೊರತಗೆಯಲಾಗಿದೆ.
ನಂತರ ಕುಕನೂರು ತಾಲ್ಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಕೊಪ್ಪಳದಲ್ಲಿ ಸದ್ಯ ಪೊಲೀಸ್ ಇಲಾಖೆಯ ಡಿಎಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಪ್ಪ ಕೊಪ್ಪದ ಅವರ ಮೊಮ್ಮಗಳ (ಮಗನ ಮಗಳು) ಹುಟ್ಟುಹಬ್ಬ ನಿಮಿತ್ತ ನಗರದ ಹೊಟೇಲ್ ಒಂದರಲ್ಲಿ ಆಯೋಜನೆಗೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವ ಗ್ರಾಮ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯ ವಿವರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ವಾಹನದಲ್ಲಿದ್ದ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ (60), ಗಿರಿಜಮ್ಮ ಕೊಪ್ಪದ (55), ಪಾರವ್ವ ಭೀಮಪ್ಪ (25), ತಿಮ್ಮಾಪೂರ ಗ್ರಾಮದ ಶಾಂತಮ್ಮ ಹನುಮಪ್ಪ (35) ಹಾಗೂ ಹರ್ಲಾಪುರ ಗ್ರಾಮದ ಕಸ್ತೂರಿ ನಾಗಪ್ಪ (25) ಮೃತಪಟ್ಟವರಾಗಿದ್ದಾರೆ.