ಸುದ್ದಿ360, ದಾವಣಗೆರೆ ಜು.25: ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಇತಿಹಾಸದಲ್ಲಿ ಅಡಕವಾಗಿದೆ. ಹೀಗಾಗಿ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದ್ದು, ದೇಶದ ಭದ್ರ ಬುನಾದಿ ಇತಿಹಾದಲ್ಲಿ ಅಡಕವಾಗಿದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಬಸವನಕೋಟೆ ಗೌಡ್ರ ವಂಶಸ್ಥರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಲೇಖಕ ಬಿ.ಎಸ್. ಸಿದ್ದೇಶ್ ಅವರ ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ ಕುರಿತ ಸಂಶೋಧನಾ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶ ಇಂದು ಭದ್ರ ನೆಲೆ ಕಂಡುಕೊಳ್ಳಲು ಇತಿಹಾಸವೇ ಮುಖ್ಯ ಕಾರಣವಾಗಿದ್ದು, ಇತಿಹಾಸವರನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಅಲ್ಲದೆ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಿದೆ. ದೇವರು, ಭಕ್ತಿ ಭಾವನೆಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಶ್ರೀ ಬೊಮ್ಮಲಿಂಗೇಶ್ವರ ಭಕ್ತರ ಹಿನ್ನೆಲೆ ಸಂಶೋಧನಾ ಕೃತಿ ಕುರಿತು ಮಾತನಾಡಿದ ಲೇಖಕ ಬಿ.ಎಸ್. ಸಿದ್ದೇಶ್, ಮುಂದಿನ ಪೀಳಿಗೆಗೆ ಹಾಗೂ ಎಲ್ಲಾ ಸಮಾಜ ಬಾಂಧವರಿಗೆ ಆದರ್ಶವಾಗಿ ದೇಶ ಕಟ್ಟುವ ಭಕ್ತಿ ಮಾರ್ಗ ತಿಳಿಸುವ ಹಾಗೂ ನಾವು ಯಾರು ಎಂಬುದನ್ನು ತಿಳಿಸುವ ಉದ್ದೇಶದಿಂದ ಪುಸ್ತಕ ಬರೆದಿದ್ದೇನೆ. ಬೊಮ್ಮಲಿಂಗೇಶ್ವರ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರ ಮೂವರ ಸಮ್ಮಿಲನವಾಗಿದೆ. ಬೊಮ್ಮಲಿಂಗೇಶ್ವರ ಭಕ್ತರ ಸಮುದಾಯದಲ್ಲಿ ವಿಗ್ರಹ ಪೂಜೆಯಿಲ್ಲ. ಬದಲಿಗೆ ಕುದುರೆಯ ಆರಾಧನೆ ಇದೆ. ಜಗಜ್ಯೋತಿ ಬಸವೇಶ್ವರರು ವಿಗ್ರಹ ಆರಾಧನೆ ವಿರೋಧಿಸಿದರು. ಅವರ ಸಂಕೇತ ಕುದುರೆಯಾಗಿತ್ತು. ಕುದುರೆಯು ವೇಗ, ಲಕ್ಷ್ಮೀ, ಚೇತನವನ್ನು ಪ್ರತಿನಿಧಿಸುತ್ತದೆ. ವಿದೇಶಗಳಲ್ಲೂ ಕುದುರೆಗೆ ಅನೇಕ ಅರ್ಥ ಹಾಗೂ ಸಂಕೇತಗಳಿವೆ ಎಂದು ತಿಳಿಸಿದರು.
ಕೃತಿ ಕುರಿತು ಕನ್ನಡ ಪ್ರಾಧ್ಯಾಪಕ ಬಸವರಾಜ ಹನುಮಲಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ, ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ, ಎ.ಆರ್. ಉಜ್ಜಿನಪ್ಪ, ಡಾ. ಮಂಜುನಾಥ ಕುರ್ಕಿ, ಅನ್ನಪೂರ್ಣ ಮಧು ಇತರರಿದ್ದರು.