ಸುದ್ದಿ360 ದಾವಣಗೆರೆ, ಜು.26: ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ಬಂಧಿಸಿರುವ ಕ್ರಮದ ವಿರುದ್ಧ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಸಂಜೆ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಎಚ್.ಜೆ. ಮೈನುದ್ದೀನ್, ಬೆಲೆ ಏರಿಕೆ, ಇಡಿ ದುರ್ಬಳಕೆ ಖಂಡಿಸಿ ಸಂಸತ್ ಭವನದ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿಯವರನ್ನು ದೆಹಲಿ ಪೊಲೀಸರು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇಂದು ದೇಶಾದ್ಯಂತ ಸಂವಿಧಾನದ ಚೌಕಟ್ಟಿನಲ್ಲಿ ಏನೇ ಹೋರಾಟ ಮಾಡಿದರೂ ಅದನ್ನು ತಡೆಯುವ, ಪ್ರತಿಭಟನೆ ನಡೆಸುವ ಕಾಂಗ್ರೆಸ್ ಮುಖಂಡರನ್ನು ಶೋಷಣೆ ಮಾಡುವ, ಬಂಧಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರರಣದಲ್ಲಿ ವಿನಾಕಾರಣ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗಿತ್ತು. ಇದೀಗ ಎರಡನೇ ಬಾರಿ ಸೋನಿಯಾ ಗಾಂಧಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಇದನ್ನು ಖಂಡಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮಂಗಳವಾರ ಸಂಸತ್ ಭವನದ ಎದುರು ರಾಹುಲ್ ಗಾಂಧಿ ಅವರನ್ನು ಬಂಧಿಸಿ ದೌರ್ಜನ್ಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಚಿರಂಜೀವಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಬಡ ಜನರ ಜೀವನದೊಂದಿಗೆ ಚಲ್ಲಾಟವಾಡುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ರಾಹುಲ್ ಗಾಂಧಿ ಅವರನ್ನು ಬಂಧಿಸಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡ ಎಲ್.ಎಚ್. ಸಾಗರ್ ಮಾತನಾಡಿ, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದೇ ಹೋರಾಟದ ಮೂಲಕ. ಇಂತಹ ಹೋರಾಟವನ್ನೇ ಹತ್ತಿಕ್ಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದು ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಯುವ ಕಾಂಗ್ರೆಸ್ ಮುಂದಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಸಯ್ಯದ್ ಇರ್ಫಾನ್, ಉತ್ತರ ಘಟಕದ ಅಧ್ಯಕ್ಷ ನವೀನ್ ನಲ್ವಾಡಿ, ಫ್ರೋಜ್, ಹಬೀಬಾ, ಅಯ್ಯಾದ್, ವಾಜೀದ್, ಹಾಲೇಶ್ ಇತರರಿದ್ದರು.