ಪ್ರವೀಣ್ ಹತ್ಯೆ ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ: ಮುಖ್ಯಮಂತ್ರಿ ಬೊಮ್ಮಾಯಿ

ಸರ್ಕಾರ ಮತ್ತು ಬಿಜೆಪಿ ಪಕ್ಷದಿಂದ ತಲಾ 25 ಲಕ್ಷ ರೂ ಚೆಕ್ ಪ್ರವೀಣ್ ಕುಟುಂಬಕ್ಕೆ

ಸುದ್ದಿ360 ಮಂಗಳೂರು, ಜು. 28 : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಅವರು ಇಂದು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕ್ಕ ಅಂಗಡಿಯೇ  ಆದಾಯದ ಮೂಲವಾಗಿತ್ತು. ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ 25 ಲಕ್ಷ ಗಳನ್ನು ಪರಿಹಾರವಾಗಿ ನೀಡಲಾಗಿದೆ. ಪ್ರವೀಣ್ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅವರ ಜೀವನದ ಮುಂದಿನ ಭವಿಷ್ಯಕ್ಕೆ ಸಹಕಾರ ನೀಡಲಾಗುವುದು. ಪ್ರವೀಣ್ ಆತ್ಮಕ್ಕೆ ಕೊಲೆಗೈದವರ ಶಿಕ್ಷೆಯಾದಾಗ ಮಾತ್ರ ಶಾಂತಿ ದೊರಕಲಿದೆ. ಪ್ರವೀಣ್ ಕುಟುಂಬದವರು ಇದೇ ಮಾತನ್ನು ಹೇಳಿದ್ದಾರೆ. ಇನ್ನೆಂದೂ ಈ ರೀತಿ ಯಾರಿಗೂ ಆಗಬಾರದು. ಇದರ ಹಿಂದಿರುವ ಸಂಘಟನೆಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.  ಕಟುಕರಿಗೆ ಶಿಕ್ಷೆ ಆಗುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು ಎಂದರು.

ಸಮಾಜಘಾತುಕ ಶಕ್ತಿಗಳ ಕುಮ್ಮಕ್ಕು

ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದುರಿಂದ ನಿರ್ಭಿಡೆಯಿಂದ ಈ ಘಟನೆಯನ್ನು ನಡೆಸಲಾಗಿದೆ. ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು. ಈ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ, ಕೆಲವರನ್ನು ವಶಕ್ಕೆ ತೆಗೆದುಕೊಂಡು, ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರೆಯಲಿದೆ. ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ  ದುಷ್ಕøತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಈ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದರು.

ಮಸೂದ್ ಹತ್ಯೆಗೂ ಹಾಗೂ ಪ್ರವೀಣ್ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್,ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ  ಕೋಟಾ ಶ್ರೀನಿವಾಸ್ ಪೂಜಾರಿ,ಮೀನುಗಾರಿಕೆ ಬಂದರು ಮತ್ತು‌ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಸಂಸದರಾದ ನಳೀನ್ ಕುಮಾರ್ ಕಟೀಲ್, ನಾಯಕರಾದ ಸಿ.ಟಿ ರವಿ, ಶಾಸಕರಾದ ಸಂಜೀವ್ ಮಠಂದೂರು, ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಜನ ಪ್ರತಿನಿಧಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!