ದಾವಣಗೆರೆ ಜೂ.14 : ರಾಜ್ಯಾದ್ಯಂತ ಅವಶ್ಯಕತೆ ಇರುವ ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡದೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಇಂದು ದಾವಣಗೆರೆ ತಾಲ್ಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದ ಶ್ರೀಮತಿ ಗೌರಮ್ಮ ಕುಂದೂರು ವೀರಭದ್ರಪ್ಪ ಟ್ರಸ್ಟ್ ಹಾಗೂ ಕುಂದೂರು ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರುಗಳು ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತ ಶಾಲೆಯ ಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ ಬಸವನಗೌಡ ಹಾಗೂ ಅವರ ಕುಟುಂಬದವರ ಸಾಮಾಜಿಕ ಸೇವಾ ಕಾರ್ಯ ಸ್ತುತ್ಯಾರ್ಹವಾದುದು ಎಂದರು.
ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಿರುವಂತೆ ಸ್ಕೂಲ್ ಕಾಂಪ್ಲೆಕ್ಸ್ ಎನ್ನುವ ಅಂಗನವಾಡಿ ಒಳಗೊಂಡ ಶಾಲಾ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹಳೆ ಬಿಸಲೇರಿಯ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದು ಉತ್ತಮ ಆಲೋಚನೆಯಾಗಿದೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಉತ್ತಮ ಶಾಲೆಯ ಕೊಠಡಿಗಳನ್ನು ಒಳಗೊಂಡ ಪರಿಕಲ್ಪನೆಯನ್ನು ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಆಲೋಚಿಸಿದ್ದರು ಎಂದರು.
ಇತ್ತೀಚಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕುಗ್ಗುತ್ತಿರುವುದರಿಂದ ಸ್ಪರ್ಧೆ ಕಡಿಮೆಯಾಗಿದೆ. ಸರ್ಕಾರಿ ಶಾಲೆಯಲ್ಲಿ ಸಿಗುವಂತಹ ಉತ್ತಮ ಬೋಧಕರು ಇತರೆಡೆ ಸಿಗಲು ಸಾಧ್ಯವಿಲ್ಲ,
15 ಸಾವಿರ ಶಿಕ್ಷಕರ ನೇಮಕ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಸರ್ಕಾರ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ರಾಜ್ಯದ 45,000 ಶಾಲೆಗಳಲ್ಲಿ 29,000 ಶಾಲೆಗಳು ಸುಸಜ್ಜಿತ ಕಟ್ಟಡಗಳಿಂದ ಕೂಡಿವೆ, ಉಳಿದ ಶಾಲಾ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ದುರಸ್ಥಿಯ ಸಮಸ್ಯೆಗಳಿವೆ ಮುಂದಿನ ದಿನಮಾನಗಳಲ್ಲಿ ಅವುಗಳನ್ನು ಕೂಡ ಅಭಿವೃದ್ಧಿಗೊಳಿಸಲಾಗುವುದು, ಇತ್ತೀಚಿಗೆ ನಡೆದ ಐಎಎಸ್ ಪರೀಕ್ಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಆಯ್ಕೆಯಾದ 24 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇದೊಂದು ಬಹಳ ಸಂತೋಷದಾಯಕ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮವಾಗಿದೆ ಏಕೆಂದರೆ ಕೆ.ವಿ ಬಸವನಗೌಡರವರು ಅತ್ಯಂತ ಆದರ್ಶಪ್ರಾಯ ಕೆಲಸವನ್ನು ಮಾಡಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯ ಒಂದು ರೀತಿಯ ಕೆಲಸವಾದರೆ, ಅದನ್ನು ನಿರ್ವಹಿಸಿಕೊಂಡು ಹೋಗುವುದು ಒಂದು ಜವಾಬ್ದಾರಿಯುತ ಕಾರ್ಯವಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಶಾಲೆಯಿಂದ ಭವಿಷ್ಯದ ಭಾರತ ಕಟ್ಟುವ ಶಿಲ್ಪಿಗಳು ಸೃಷ್ಟಿಯಾಗಲಿ, ಅಂಬೇಡ್ಕರ್ ಅಬ್ಡುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳು ಈ ಶಾಲೆಯಿಂದ ಕಲಿತು ಬರಲಿ ಎಂದರು.
ದಾವಣಗೆರೆ ಲೋಕಸಭಾ ಸದಸ್ಯ ಡಾ.ಜಿ.ಎಂ ಸಿದ್ದೇಶ್ವರ್ ಮಾತನಾಡಿ, ತಾವು ಹುಟ್ಟಿ, ಬೆಳೆದು, ಓದಿದ ಊರಿಗೆ ಹೋಗಿ ಏನಾದರೂ ಮಾಡಬೇಕು ಎನ್ನುವ ಕನಸಿನಂತೆ ಹಳೆ ಬಿಸಲೇರಿ ಗ್ರಾಮದಲ್ಲಿ ಹೈಟೆಕ್ ಶಾಲಾ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿರುವ ಕೆ.ವಿ ಬಸವನಗೌಡ ಹಾಗೂ ಅವರ ಕುಟುಂಬದವರ ಕಾರ್ಯ ಶ್ಲಾಘನೀಯವಾದದ್ದು ಈ ರೀತಿಯಾಗಿ ಜಿಲ್ಲೆಯಲ್ಲಿ ದಾನಿಗಳು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಮುಂದಾದರೆ ಶಾಲೆಗಳಲ್ಲಿ ಕಟ್ಟಡಗಳ ಕೊರತೆಗಳು ಉಂಟಾಗುವುದಿಲ್ಲ. ಆಧುನಿಕ ಯುಗದಲ್ಲಿ ದುಡ್ಡಿಗಿಂತ ವಿದ್ಯೆ ಮುಖ್ಯ, ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ತಾವು ಜನಿಸಿದ ಊರಿನ ಋಣ ತೀರಿಸಲು ಶ್ರೀಮತಿ ಗೌರಮ್ಮ ಕುಂದುರು ವೀರಭದ್ರಪ್ಪ ಟ್ರಸ್ಟ್ ಹಾಗೂ ಕುಂದೂರು ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಕೆ.ವಿ ಬಸವನಗೌಡರು ತಮ್ಮ ಗ್ರಾಮಕ್ಕೆ ಹೈಟೆಕ್ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಿರುವುದು ಪ್ರಶಂಸನೀಯವಾದ ಕೆಲಸವಾಗಿದೆ. ತಾವು ಕಷ್ಟಪಟ್ಟು ದುಡಿದ ಹಣವನ್ನು ದಾನ ಮಾಡೋದಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. .ಕೆ.ಸಿದ್ದಪ್ಪ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಕೆ.ವಿ ಬಸವನಗೌಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ 11 ವಿಶಾಲ ಸುಂದರಮಯ ಶಾಲಾ ಕೊಠಡಿಗಳು, 2 ಸುಸಜ್ಜಿತ ಅಡುಗೆ ಕೋಣೆ, 2 ಶೌಚಾಲಯಗಳು ಹಾಗೂ ಶಾಲಾ ಆಡಳಿತಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಿದ ಶಾಲೆಯ ಕೀಲಿಕೈಯನ್ನು ವೇದಿಕೆ ಮೇಲೆ ಸಚಿವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎ.ಹೆಚ್ ಶಿವಯೋಗಿ ಸ್ವಾಮಿ, ಜಿ.ಪಂ ಸಿಇಓ ಡಾ. ಎ.ಚನ್ನಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಡಿಡಿಪಿಐ ಜೆ.ಆರ್ ತಿಪ್ಪೇಶಪ್ಪ ಸೇರಿದಂತೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.