ತಪ್ಪು ಮಾಡಿಲ್ಲವಾದರೆ ತನಿಖೆಗೆ ಸಹಕರಿಸಲಿ: ಸಂಸದ ತೇಜಸ್ವಿ ಸೂರ್ಯ

ದಾವಣಗೆರೆ, ಜೂ.14: ಸರಕಾರದ ಯಾವುದೇ ಸಂಸ್ಥೆಗಳು ನಮ್ಮನ್ನು ತನಿಖೆ ಮಾಡುವುದಿರಲಿ, ಪ್ರಶ್ನೆ ಮಾಡುವುದಕ್ಕೂ ಸಾಧ್ಯವಿಲ್ಲ ಎಂಬ ಭಾವನೆಯಲ್ಲಿ ರಾಹುಲ್, ಸೋನಿಯಾ ಹಾಗೂ ಕಾಂಗ್ರೆಸಿಗರಿದ್ದಾರೆ ಎಂಬುದು ಅವರ ಈ ಪ್ರತಿಭಟನೆಯ ಸಂಕೇತ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಎಂಥವರಿಗೂ ಕಣ್ಣಿಗೆ ಕಾಣಿಸುವಂತಿದೆ. ಒಂದೊಮ್ಮೆ ಅವರು ತಪ್ಪು ಮಾಡಿಲ್ಲ, ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದಾದರೆ ತನಿಖೆಗೆ ಸಹಕರಿಸಬೇಕಿತ್ತು. ಕೋರ್ಟ್‌ಗೆ ಹಾಜರಾಗಿ ಅಲ್ಲಿ ಬರುವ ತೀರ್ಪನ್ನು ಒಪ್ಪಿಕೊಳ್ಳುವ ಧೈರ್ಯ ತೋರಬೇಕಿತ್ತು. ಆದರೆ ಅದಾವುದನ್ನೂ ಮಾಡದೆ, ಪಕ್ಷದ ಕಾರ್ಯಕರ್ತರನ್ನು ಪ್ರತಿಭಟನೆಗೆ ಇಳಿಸುವ ಮೂಲಕ ತಾವು ತಪ್ಪು ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದರು.

ಯುವರಾಜ ರಾಹುಲ್ ಗಾಂಧಿ ತಮ್ಮ ಮನಸಿನೊಳಗೆ ಕಟ್ಟಿಕೊಂಡಿರುವ ಅರಮನೆಯಿಂದ ಹೊರಬಂದು ಸಾಮಾನ್ಯ ಪ್ರಜೆಯಂತೆ ವರ್ತಿಸಬೇಕು. ಸತ್ಯ ಅವರ ಪರವಾಗಿದ್ದರೆ ಜಯ ಖಂಡಿತ ಸಿಗುತ್ತದೆ. ತಪ್ಪು ಮಾಡಿರುವುದು ಸಾಬೀತಾದರೆ ಶಿಕ್ಷೆಗೆ ಗುರಿಯಾಗುತ್ತಾರೆ. ಎರಡನ್ನೂ ಸಮನಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡುತ್ತಿದ್ದ ಕಾಂಗ್ರೆಸ್, ಇಂದು, ಸೋನಿಯಾ, ರಾಹುಲ್ ಗಾಂಧಿ ಭ್ರಷ್ಟಾಚಾರದ ತನಿಖೆ ಆಗಬಾರದು ಎಂಬ ಕಾರಣಕ್ಕೆ ಪ್ರತಿಭಟನೆ ಮಾಡುವ ಮೂಲಕ ಸರಕಾರ ಮತ್ತು ಇಡಿ ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುವ ಮಟ್ಟಕ್ಕೆ ಇಳಿದಿರುವುದು ಆ ಪಕ್ಷದ ದೌರ್ಭಾಗ್ಯವಾಗಿದೆಎಂದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ೧೦ ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ನಿರಂತರವಾಗಿ ತನಿಖೆಗೆ ಒಳಪಡಿಸಿದ್ದರು. ಅಂದು ಅವರು ಸಿಎಂ ಆಗಿದ್ದರೂ ಒಬ್ಬರೇ ಹೋಗಿ ತನಿಖೆ ಎದುರಿಸಿದರು. ಎಲ್ಲ ಹಂತದ ಕೋರ್ಟ್‌ಗಳಲ್ಲೂ ಅವರಿಗೆ ಜಯ ಸಿಕ್ಕಿತು. ಒಮ್ಮೆ ಕೂಡ ಅವರು ಪಕ್ಷದವರನ್ನು ಪ್ರತಿಭಟನೆಗೆ ಇಳಿಸಿ, ಬ್ಲಾಕ್ ಮೇಲ್ ಮಾಡಲಿಲ್ಲ. ಅಂತಹ ಸಂಸ್ಕೃತಿ ಬಿಜೆಪಿ ಇತಿಹಾಸದಲ್ಲೇ ಇಲ್ಲಎಂದರು.

admin

admin

Leave a Reply

Your email address will not be published. Required fields are marked *

error: Content is protected !!