ಸುದ್ದಿ360 ಬೆಂಗಳೂರು ಆ.2: ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಡೀರ್ ಎಂಬಂತೆ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಗಳೂರಿಗೆ ತೆರಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶಗೊಂಡಿರುವ ಬೆನ್ನಲ್ಲೇ ಅಮಿತ್ ಷಾ ಅವರ ರಾಜ್ಯ ಪ್ರವಾಸ ಮಹತ್ವ ಪಡೆದುಕೊಂಡಿದೆ.
ಸ್ವಪಕ್ಷೀಯರ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಖಾಡಕ್ಕಿಳಿಯುವ ಮೂಲಕ ಕಾರ್ಯಕರ್ತರ ಸಮಾಧಾನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾದಂತಿದೆ.
ಅಮಿತ್ ಷಾ ಅವರು ರಾಜ್ಯಕ್ಕೆ ಬರುವ ಮೂರು ದಿನಗಳ ಮುಂಚೆಯೇ ಅವರ ಪ್ರವಾಸದ ಕಾರ್ಯಕ್ರಮ ಬಿಡುಗಡೆ ಮಾಡಲಾಗುತಿತ್ತು. ಆದರೆ ಈ ಬಾರಿ ರಾಜ್ಯ ನಾಯಕರಿಗೆ ಮಾಹಿತಿ ನೀಡದೇ ಹೈಕಮಾಂಡ್ ದಿಢೀರ್ ಆಗಿ ಪ್ರವಾಸ ನಿಗದಿಪಡಿಸಿದೆ. ಒಂದು ಪಕ್ಷದ ಕಾರ್ಯಕ್ರಮ, ಇನ್ನೊಂದು ಸರ್ಕಾರಿ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡು ರಾಜ್ಯಕ್ಕೆ ಅಮಿತ್ ಶಾ ಆಗಮಿಸುತ್ತಿದ್ದಾರೆ.
ಸಿಐಐಎ ನ ಕಲ್ಚರಲ್ ವಿಂಗ್ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಿಐಐಎ ನ ಕಲ್ಚರಲ್ ವಿಂಗ್ ನ ಸಭೆಗಾಗಿ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.