ರಾಜಸ್ಥಾನ ಮೂಲದ ಸೈಬರ್ ವಂಚಕನನ್ನು ಬಂಧಿಸಿದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಆ.05:  ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯಿಂದ ಸಾರ್ವಜನಿಕರನ್ನು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಆರೋಪಿ ಅಮನ್ ತಿವಾರಿಯನ್ನು ದಾವಣಗೆರೆ ಸಿಇಎನ್, ಅಪರಾಧ ಠಾಣೆ ಪೊಲೀಸರು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಈ ಕುರಿತು ಇಂದು ದಾವಣಗೆರೆ ಜಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯನ್ನು ಹೊಂದಿದ್ದ ರಕ್ಷಿತ್ ಬಿ. ಇವರು ಇದೇ ವರ್ಷ ಜ.21ರಂದು ಯಾರೋ ಅಪರಿಚಿತರು ತನ್ನ ಖಾತೆಯನ್ನು ಹ್ಯಾಕ್ ಮಾಡಿ  45000 ರೂ.ಗಳನ್ನು ವಂಚಿಸಿರುವುದಾಗಿ ನೀಡಿದ ದೂರಿನನ್ವಯ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರನ್ನು ಆಧರಿಸಿ  ಕಾರ್ಯಾಚಾರಣೆಗಿಳಿದ ತಂಡ ವಂಚಕನ ಜಾಡನ್ನು ಬೇಧಿಸಿದೆ.

ದಾವಣಗೆರೆ ಡಿಸಿಆರ್ ಬಿ ಘಟಕದ  ಡಿವೈಎಸ್ ಪಿ ಬಸವರಾಜ್ ಅವರ ನೇತೃತ್ವದಲ್ಲಿ ವಂಚಕನ ಜಾಲವನ್ನು ಬೆನ್ನುಹತ್ತಿದ ಸಿಇಎನ್ ಅಪರಾಧ ಠಾಣೆ ಪಿಎಸ್ಐ ಪರಮೇಶ್ ಡಿ.ಜಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಮಾರುತಿ, ಮುತ್ತುರಾಜ್, ಮಲ್ಲಿಕಾರ್ಜುನ ಹಾದಿಮನಿ ಇವರನ್ನೊಳಗೊಂಡ ತಂಡ, ರಾಜಸ್ಥಾನ ರಾಜ್ಯದ ಅಲ್ವಾರ ನಗರದಲ್ಲಿ ಆರೋಪಿ ಅಮನ್ ತಿವಾರಿಯನ್ನು ದಸ್ತಗಿರಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್, ದೂರುದಾರರಿಗೆ ಮತ್ತು ಇತರೆ ಸಾರ್ವಜನಿಕರಿಗೆ ವಂಚಿಸಿ ಖರೀದಿಸಿದ್ದ ಅಂದಾಜು 1.5ಲಕ್ಷ ಮೌಲ್ಯದ 3 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ರಾಜಸ್ಥಾನದ ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಲ್ಲಿಂದ ದಾವಣಗೆರೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಎಚ್ಚರಿಕೆ ಸಂದೇಶಗಳನ್ನೊಳಗೊಂಡ ಕರಪತ್ರಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರದರ್ಶಿಸಿದರು.

ಈ ಪ್ರಕರಣದಲ್ಲಿ ಆರೋಪಿಯ ಪತ್ತೆ ಮತ್ತು ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ. ಬಸರಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಧುನಿಕ ತಂತ್ರಾಂಶಗಳ ಬಳಕೆಯಲ್ಲಿ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಯ್ದುಕೊಳ್ಳದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ. ಈ ಮಾತನ್ನು ಪೊಲೀಸ್ ಇಲಾಖೆ ಸಾಕಷ್ಟು ಬಾರಿ ಹೇಳುತ್ತಾ ಜನರಲ್ಲಿ  ಜಾಗೃತಿ ಮೂಡಿಸುತ್ತಿದ್ದರೂ ಸಹ ಸೈಬರ್ ವಂಚಕರ ಜಾಲದಿಂದ ನಡೆಯುವ ಅಪರಾಧಗಳು ದಿನೇ ದಿನೇ ಹೆಚ್ಚುತ್ತಲೇಇವೆ. ಈ ರೀತಿ ವಂಚಕರ ಜಾಡಿಗೆ ಬಲಿಯಾಗುತ್ತಿರುವವರು ವಿದ್ಯಾವಂತರೇ ಆಗಿದ್ದಾರೆ ಎಂದು ತಿಳಿಸಿದ ವರಿಷ್ಟಾಧಿಕಾರಿಗಳು, ಸಾಕಷ್ಟು ಜನ ಅಂತರ್ಜಾಲದಲ್ಲಿ ತಾವು ಬಳಸುವ ನಾನಾ ವೆಬ್ ಸೈಟ್ ಮತ್ತು ಆ್ಯಪ್ಗಳಲ್ಲಿ ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಬಳಸುತ್ತಾರೆ. ಇದು ಹ್ಯಾಕರ್ಸ್ಗಳಿಗೆ ಅನುಕೂಲವಾಗಲಿದ್ದು, ಸಾರ್ವಜನಿಕರು ಬಳಸುವ ಅನಧಿಕೃತ ಮತ್ತು ಸೆಕ್ಯೂರ್ ಅಲ್ಲದ ಜಾಲತಾಣಗಳಿಂದ  ಗ್ರಾಹಕರ ಇಮೇಲ್ ಐಡಿ ಮತ್ತು ಪಾಸ್ ವರ್ಡ್ಗಳನ್ನು ಪಡೆಯುತ್ತಾರೆ. ನಂತರ ತಾವು ಸೃಷ್ಟಿಸಿಕೊಂಡ ತಂತ್ರಾಂಶದಲ್ಲಿ ಒಂದೇ ಪಾಸ್ವರ್ಡ್ ವಿವಿಧ ವೆಬ್ಸೈಟ್ಗಳಲ್ಲಿ ಉಪಯೋಗಿಸಿರುವುದನ್ನು ಸುಲಭವಾಗಿ ಪತ್ತೆ ಮಾಡುವ ಮೂಲಕ ಸಾರ್ವಜನಿಕರ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ರಕ್ಷಿತ್ ಅವರ ಖಾತೆ ಹ್ಯಾಕ್ ಆಗಲು ಅವರು ಒಂದೇ ಪಾಸ್ವರ್ಡ್ ಹಲವು ಅ್ಯಪ್ ಗಳಲ್ಲಿ ಬಳಸಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ. ಬಸರಗಿ, ಡಿಸಿಆರ್ ಬಿ ಘಟಕದ  ಡಿವೈಎಸ್ ಪಿ ಬಸವರಾಜ್ ಒಳಗೊಂಡಂತೆ ತಂಡದ ಸದಸ್ಯರು ಇದ್ದರು.

ವಿಶೇಷ ಸೂಚನೆ

ವಂಚಕರ ಜಾಲವು ಸಾರ್ವಜನಿಕರ ಸಾಮಾಜಿಕ ಜಾಲತಾಣಗಳ, ಈ-ಮೇಲ್ ಹಾಗೂ ಯುಪಿಐ ಖಾತೆಗಳನ್ನು ವಿವಿಧ ತಂತ್ರಾಂಶಗಳ ಮೂಲಕ ಹ್ಯಾಕ್ ಮಾಡಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಯಿರುವುದರಿಂದ ಸಾರ್ವಜನಿಕರು ತಮ್ಮ ಸಾಮಾಜಿಕ ಜಾಲತಾಣಗಳ, ಇ-ಮೇಲ್, ಹಾಗೂ ಯುಪಿಐ ಖಾತೆಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ ಅಳವಡಿಸಿಕೊಳ್ಳಬೇಕು. ತಮ್ಮ ಖಾತೆಗಳಿಗೆ ಬೇರೆ ಬೇರೆಯದೇ ಪಾಸ್ವರ್ಡ್ ಅಳವಡಿಸಿಕೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!