ದಾವಣಗೆರೆ: ಜನಸಾಮಾನ್ಯರ ಸಮಸ್ಯೆ ಚರ್ಚಿಸದ ‘ಸಾಮಾನ್ಯ’ ಸಭೆ

ಸುದ್ದಿ360 ದಾವಣಗೆರೆ ಆ.6: ಜನಸಾಮಾನ್ಯರ ಸಮಸ್ಯೆ ಚರ್ಚಿಸಲು ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆಯೇ ನಡೆಯುತ್ತಿಲ್ಲ. ಬರಿಯ ಹಾರಿಕೆ ಉತ್ತರ ನೀಡಿ ಸಾಮಾನ್ಯ ಸಭೆ ಮುಂದೂಡಲಾಗುತ್ತಿದೆ ಎಂಬ ವಿಪಕ್ಷ ನಾಯಕರ ಆರೋಪದ ಬೆನ್ನಲ್ಲೇ ಇಂದು ಸಾಮಾನ್ಯ ಸಭೆ ನಡೆದಿದೆ.

ಆರೂವರೆ ತಿಂಗಳ ಬಳಿಕ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಯಾವುದೇ ಗಂಭೀರ ಸಮಸ್ಯೆಗಳು ಚರ್ಚೆಗೆ ಬರದೆ ಮೊದಲಾರ್ಧ ಕೇವಲ ವಾದ ವಿವಾದದಲ್ಲೇ ಅಂತ್ಯ ಕಂಡಿತು.

ಸಭೆ  ಆರಂಭವಾಗುತ್ತಿದ್ದಂತೆ ನಡಾವಳಿಯ ಮೊದಲ ವಿಷಯ ‘ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಒಪ್ಪಿಗೆ ಸ್ಥಿರೀಕರಿಸುವುದರ’ ಕುರಿತು ಸುದೀರ್ಘ ಚರ್ಚೆ ನಡೆದು ಸದಸ್ಯರು, ಮೇಯರ್, ಅಧಿಕಾರಿಗಳೆಲ್ಲಾ ಮಧ್ಯಾಹ್ನದ ಊಟಕ್ಕೆ ನಡೆದರು. ಈ ನಡುವೆ ನಗರದ ಕೆಲ ಬಡಾವಣೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ, ಗ್ಯಾಸ್ ಸಂಪರ್ಕಕ್ಕೆ ಹಣ ವಸೂಲಿ ಮತ್ತು ಹೆಗಡೆ ನಗರದ ನಿವಾಸಿಗಳಿಗೆ ನಿವೇಶನ, ಮನೆ ಒದಗಿಸುವಂತಹ ಒಂದೆರಡು ಜನಪರ ವಿಷಯಗಳ ಕುರಿತು ಸ್ವಲ್ಪ ಹೊತ್ತು ಚರ್ಚೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಪಾಲಿಕೆ ಪ್ರತಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್, ನಡಾವಳಿ ಓದುವ ಮೊದಲು ನಗರದ ಜನ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಎಲ್ಲಾ ವಾರ್ಡ್ ಸದಸ್ಯರಿಗೂ 2 ನಿಮಿಷ ಮಾತನಾಡಲು ಅವಕಾಶ ನೀಡಬೇಕೆಂದು ಮೇಯರ್ ಆರ್. ಜಯಮ್ಮ ಅವರಲ್ಲಿ ಕೋರಿದರು. ಆದರೆ ಮೇಯರ್ ಸೇರಿ ಬಿಜೆಪಿಯ ಎಲ್ಲ ಸದಸ್ಯರಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಸಭೆಯ ಮೊದಲ ಅರ್ಧ ತಾಸು ಇದರ ಗದ್ದಲ, ವಾಗ್ವಾದದಲ್ಲಿಯೇ ಕಳೆಯಿತು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು

  • ಮೇಯರ್ ಜಯಮ್ಮ ಗೋಪೀನಾಯ್ಕ್ ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಕಾಮಗಾರಿ ಟೆಂಡರ್ ಕರೆದಿಲ್ಲದಿರುವುದು.
  • ಮಧ್ಯರಾತ್ರಿ ಅಕ್ರಮವಾಗಿ ಕೇಬಲ್ ಅಳವಡಿಸುವ ಕಂಪನಿ, ಗುತ್ತಿಗೆದಾರರ ವಿರುದ್ಧ ಕ್ರಮ
  • ನಗರದಲ್ಲಿ ಶ್ವಾನಗಳ ಕಾಟ ಹೆಚ್ಚಾಗಿದ್ದು, ಅವುಗಳ ಸಂಖ್ಯೆ ನಿಯಂತ್ರಣಕ್ಕೆ ಶೀಘ್ರ ಕ್ರಮ.
  • ಶಾಮನೂರಿನ ಶಿವ ಪಾರ್ವತಿ ಬಡಾವಣೆ ಹೆಸರು ಬದಲಾವಣೆ ಕುರಿತು ವಾದ-ವಿವಾದ
  • ಪೈಪ್ ಮೂಲಕ ಗ್ಯಾಸ್ ಸಂಪರ್ಕ ಸಂಬಂಧ ನಡೆಯುತ್ತಿರುವ ಹಣ ವಸೂಲಿ ನಿಲ್ಲಬೇಕು
  • ರಿಂಗ್ ರಸ್ತೆ ಮುಂದುವರಿಸಲು ಹೆಗಡೆ ನಗರ ನಿವಾಸಿಗಳ ಸ್ಥಳಾಂತರಕ್ಕೆ ಸೂಕ್ತ ಜಮೀನು ಖರೀದಿ
  • ಅವಕಾಶ ಇಲ್ಲದಿದ್ದರೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ನೀಡಿ, ಬಿಲ್ ಪಾವತಿಗೆ ಆಕ್ಷೇಪ

ಸಭೆಯಲ್ಲಿ ಮಾತನಾಡಿದ ಪಾಲಿಕೆ ಹಿರಿಯ ಸದಸ್ಯ ಎ. ನಾಗರಾಜ್, ಮೇಯರ್ ಮಾತೃ ಸಮಾನರು. ಈ ಸಭೆಯಲ್ಲಿ ಮಲತಾಯಿ ಧೋರಣೆ ತೋರದೆ, ಎಲ್ಲ ಸದಸ್ಯರನ್ನೂ ತಮ್ಮ ಮಕ್ಕಳಂತೆಯೇ ಪರಿಗಣಿಸಿ, ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ನೀವು ನನ್ನನ್ನು ತಾಯಿ ಎಂದಿದ್ದೀರ. ಹೀಗಾಗಿ ತಾಯಿ ಹೇಳಿದ್ದನ್ನು ಮಕ್ಕಳು ಕೇಳಬೇಕು. ಈಗ ಸಮಸ್ಯೆ ಚರ್ಚೆ ಬಿಟ್ಟು ಮೊದಲು ನಡಾವಳಿ ಓದಲು ಅವಕಾಶ ನೀಡಿ ಎಂದಾಗ ಸಭೆ ಗದ್ದಲಮಯವಾಯಿತು.

‘ಹೈಟೆನ್ಷನ್’! – ಪರಿಶೀಲನೆ  ನಂತರ ಡೋರ್ ನಂಬರ್

ನಿಟ್ಟುವಳ್ಳಿ ವಿಭಾಗದ 2 ಎಕರೆ 28 ಗುಂಟೆ ಜಾಗದಲ್ಲಿ ನಿರ್ಮಾಣವಾಗಿರುವ ಬಡಾವಣೆ ಮೇಲೆ ಹೈಟೆನ್ಷನ್ ವಿದ್ಯುತ್ ಲೈನ್ ಹಾದುಹೋಗಿದ್ದು, ಅಲ್ಲಿ ಯಾವುದೇ ಕಾರಣಕ್ಕೂ ಡೋರ್‌ನಂಬರ್ ನೀಡಬಾರದು ಎಂದು ಈ ಹಿಂದಿನ ಸಭೆಗಳಲ್ಲಿ ತೀರ್ಮಾನಿಸಿದ್ದರೂ ಡೋರ್ ನಂಬರ್ ನೀಡಲಾಗಿದೆ ಎಂದು ಸದಸ್ಯೆ ಉಮಾ ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಆಯುಕ್ತ ವಿಶ್ವನಾಥ ಮುದಜ್ಜಿ, ಈ ಕುರಿತಂತೆ ಧೂಡ ಸ್ಥಳ ಪರಿಶೀಲಿಸಿದ್ದು, ಅಲ್ಲಿ ಯಾವುದೇ ಹೈಟೆನ್ಷನ್ ಲೈನ್ ಹಾದು ಹೋಗಿಲ್ಲ ಎಂದು ಪ್ರತಿಕ್ರಿಯಿಸಿದ್ದರಿಂದ ಡೋರ್ ನಂಬರ್ ನೀಡಲಾಗುತ್ತಿದೆ ಎಂದರು. ಪಾಲಿಕೆಯಿಂದ ಸಮಿತಿ ರಚಿಸಿ ಪರಿಶೀಲನೆ ನಡೆಸುವವರೆಗೂ ಡೋರ್ ನಂಬರ್ ನೀಡದಂತೆ ಸಭೆ ತೀರ್ಮಾನಿಸಿತು.

ಪಾಲಿಕೆಗೆ ನೂತನ ಕಾನೂನು ಸಲಹೆಗಾರರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಇದುವರೆಗೆ ಪಾಲಿಕೆ, ಒಂದೇ ಒಂದು ಕೋರ್ಟ್ ಕೇಸನ್ನೂ ಗೆದ್ದಿಲ್ಲ. ಪ್ರಕರಣಗಳ ವಿಚಾರಣೆಗೆ ಪಾಲಿಕೆಯ ನ್ಯಾಯವಾದಿಗಳು ಹಾಜರಾಗದಿರುವುದೇ ಇದಕ್ಕೆ ಕಾರಣ ಎಂದು ಎ.ನಾಗರಾಜ್ ಗಮನಸೆಳೆದರು. ಈ ಹಿಂದೆ ನಮ್ಮ ವಾರ್ಡ್‌ನ ಪ್ರಕರಣ ಸಂಬಂಧ ಪಾಲಿಕೆ ಪರ ಲಾಯರ್ ಹಾಜರಾಗದೇ ಇದ್ದಾಗ ಸ್ವತಃ ಮ್ಯಾಜಿಸ್ಟ್ರೇಟ್ ಅವರೇ ನನ್ನನ್ನು ಪ್ರಶ್ನಿಸಿದ್ದರು. ಇದರಿಂದ ಪಾಲಿಕೆ ಘನತೆಗೆ ಧಕ್ಕೆ ಬರುತ್ತದೆ. ಹೀಗಾಗಿ ಒಂದು ಪಕ್ಷ ಪ್ರತಿನಿಧಿಸುವ ನ್ಯಾಯವಾದಿಗಳ ಬದಲು, ಪಾಲಿಕೆ ಪರವಾಗಿ ಗಟ್ಟಿಯಾಗಿ ನಿಂತು ವಾದಿಸುವ ವಕೀಲರನ್ನು ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಾಜಿ ಮೇಯರ್ ಅಜಯ್‌ಕುಮಾರ್ ಮಾತನಾಡಿ, ನಿಟ್ಟುವಳ್ಳಿ ವಿಭಾಗದ ಬಡಾವಣೆಯ ಸೈಟ್‌ಗಳಿಗೆ ಪದೇ ಪದೆ ಡೋರ್ ನಂಬರ್ ಕೊಡುವುದು, ನಿಲ್ಲಿಸುವುದು ಮಾಡಿದರೆ ಪಾಲಿಕೆ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಬರುತ್ತದೆ. ಜತೆಗೆ, ಜನ ಸಮಾನಾನ್ಯರಿಗೆ ತೊಂದರೆ ನೀಡಿದಂತಾಗುತ್ತದೆ. ಕಾರಣ, ಈಗಾಗಲೇ ಇತ್ಯರ್ಥವಾಗಿರುವ ವಿಷಯವನ್ನು ಎಳೆದಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಪ್ರತಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್ ಮಾತನಾಡಿ, ನಗರದಲ್ಲಿರುವ ಕಲ್ಯಾಣ ಮಂಟಪ, ಹೋಟೆಲ್, ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಬಾರ್ ಮತ್ತು ರೆಸ್ಟೋರೆಂಟ್‌ನವರು ತಮ್ಮಲ್ಲಿ ಉಳಿದ ಆಹಾರ, ಮೈದಾ ಹಿಟ್ಟು ಮತ್ತಿತರ ಸಾಮಗ್ರಿಗಳನ್ನು ಒಳಚರಂಡಿಗೆ ಸುರಿಯುತ್ತಾರೆ. ಇದರಿಂದ ಚೇಂಬರ್ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತದೆ. ಗುಂಡಿ ಚೌಟ್ರಿ ಸಮೀಪ ಈ ಸಮಸ್ಯೆ ಅತಿಯಾಗಿದೆ ಎಂದು ಸಭೆಯ ಗಮನಸೆಳೆದರು. ಮಾಜಿ ಮೇಯರ್ ಅಜಯ್ ಕುಮಾರ್ ಕೂಡ ಇದಕ್ಕೆ ದನಿಗೂಡಿಸಿದರು. ಈ ಕುರಿತು ಚರ್ಚೆ ನಡೆದು ಅಧಿಕಾರಿಗಳು, ಸದಸ್ಯರನ್ನೊಳಗೊಂಡ 5 ಜನರ ಸಮಿತಿ ರಚಿಸಲು ತೀರ್ಮಾನಿಸಿತು.

ಶ್ರೀನಿವಾಸ್ ದಂಪತಿಯಿಂದ  ಪ್ರಮಾಣವಚನ ಸ್ವೀಕಾರ

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಪಾಲಿಕೆಗೆ ನೂತನವಾಗಿ ಅಯ್ಕೆಯಾದ ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಪ್ರಮಾಣವಚನ ಸ್ವೀಕರಿಸಿದರು. ಶ್ರೀನಿವಾಸ್ ತಮ್ಮ ವಾರ್ಡ್ ನಾಗರಿಕರು ಹಾಗೂ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪ್ರವಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಕೇಸರಿ ಉಡುಗೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.

admin

admin

Leave a Reply

Your email address will not be published. Required fields are marked *

error: Content is protected !!