ಕಲಾ ವಿದ್ಯಾರ್ಥಿಗಳಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಕಿವಿಮಾತು
ಸುದ್ದಿ360, ದಾವಣಗೆರೆ ಆ.06: ಕಲಾವಿದನಾದವನು ಸಾಮಾಜಿಕ ಬದ್ಧತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಘಟಿಸುವ ತಲ್ಲಣಗಳಿಗೆ ಚಿತ್ರಕಲಾವಿದನಾದವನು ರಸ್ತೆಗಿಳಿಯುವುದಕ್ಕಿಂತ ತನ್ನ ಕಲೆಯ ಮೂಲಕ ಪ್ರತಿಸ್ಪಂದನೆಯನ್ನು ತೋರಬೇಕು ಎಂಬುದಾಗಿ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಡಿ. ಮಹೇಂದ್ರ ಕಲಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರೌಢಶಾಲಾ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ (ಡಯಟ್) ಸಭಾಂಗಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಸಂಸ್ಕಾರ ಭಾರತಿ ದಾವಣಗೆರೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ದೃಶ್ಯಕಲಾ ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ದಿಕ್ಸೂಚಿ ಭಾಷಣವನ್ನು ಅವರು ನಿರ್ವಹಿಸಿದರು.
ಯುರೋಪ್‌ನ ಖ್ಯಾತ ಕಲಾವಿದ ಡಾಲಿ ಪ್ರಾರಂಭದ ದಿನಗಳಲ್ಲಿ ವಿಜ್ಞಾನದ ವಿಷಯದಡಿ ರೇಖಾಚಿತ್ರಗಳನ್ನು ರಚಿಸುತ್ತಿದ್ದ. ಆದರೆ ಆತ ಕೊನೆಗಾಲದಲ್ಲಿ ಆಧ್ಯಾತ್ಮದತ್ತ ವಾಲಿ, ಬೈಬಲ್‌ನ ರೇಖಾಚಿತ್ರಗಳನ್ನು ಚಿತ್ರಿಸಿಸಲು ಹೊರಟ. ಈ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಆತ ಉತ್ತರಿಸಿದ್ದು, ವಿಜ್ಞಾನದ ಜಗತ್ತನ್ನು ಇಟ್ಟುಕೊಂಡು ಬದುಕಲಾಗದು. ಅಂತರಂಗದ ಚಕ್ಷುವಿನಿಂದ ನೋಡಿ ಬದುಕಬೇಕು ಎಂದು ಹೇಳಿದನಂತೆ. ಕಲಾವಿದರಾದ ನಾವು ಸಹ ಎಲ್ಲವನ್ನೂ ಬಾಹ್ಯ ಪ್ರಪಂಚವೇ ಬೇರೆ, ಅಂತರಂಗದ ಪ್ರಪಂಚವೇ ಬೇರೆ ಎಂದು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಕಲಾವಿದರಾದ ನಾವು ಒಂದು ಇತಿಮಿತಿಯನ್ನು ಹಾಕಿಕೊಂಡಿದ್ದೇವೆ. ನಮ್ಮ ಸಾಮರ್ಥ್ಯಗಳನ್ನು ಕಟ್ಟಿಹಾಕಿದ್ದೇವೆ. ಅದನ್ನು ಒದ್ದು ಹೋಗುವ ಸಾಮರ್ಥ್ಯವಿದ್ದರೂ, ಹೋಗುತ್ತಿಲ್ಲ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಿರಿ. ನೀವು ಏನನ್ನು ಕಲಿಯುತ್ತಿದ್ದೇನೆ ಎಂದು ಅರಿತು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಭಾರತದ ಸಾಂಸ್ಕೃತಿಕ ನೆಲೆ ಹೇಗಿರಬೇಕು ಎಂಬುದರ ಕುರಿತು ನೆಹರು ಅವರು ವಿದೇಶಗಳಲ್ಲಿ ಆಗುತ್ತಿರುವ ಪ್ರಯೋಗಗಳಿಗೆ ಮಾದರಿಯಾಗಬೇಕು ಎಂದು ಪತ್ರ ಬರೆದರು. ಅದಕ್ಕಿ ಖಾರವಾಗಿ ಪ್ರತಿಕ್ರಿಯಿಸಿದ ಗಾಂಧೀಜಿಯವರು, ನಮಗೆ ಮಾದರಿಯಾಗಬೇಕಿರುವುದು ನಮ್ಮದೇ ಮೂಲ ಸಂಸ್ಕೃತಿಯೇ ಹೊರತು ವಿದೇಶದ್ದಲ್ಲ ಎಂದರು. ಕಾರಣ ಭಾರತ ಕಲೆ, ಸಂಸ್ಕೃತಿಯಲ್ಲಿ ಪಾಶ್ಚಾತ್ಯ ದೇಶಗಳಿಗಿಂತ ಎರಡು ಹೆಜ್ಜೆ ಮುಂದಿತ್ತು ಎಂದು ಹೇಳುವ ಮೂಲಕ ನಮ್ಮ ನೆಲದ ಕಲೆಯ ಉನ್ನತಿಯನ್ನು ಸಾರಿದರು.
ಅಕಾಡೆಮಿ ವತಿಯಿಂದ ವಿದ್ಯಾರ್ಥಿ ಹಾಗೂ ಶಿಕ್ಷರಿಗೆ ತಳಮಟ್ಟದಿಂದ ತರಬೇತಿ ನೀಡುವ ಕುರಿತು ಆಲೋಚಿಸಿದ್ದು, ಈ ನಿಟ್ಟಿನಲ್ಲಿ ಅಕಾಡೆಮಿ ದೃಶ್ಯಕಲಾ ವಿಚಾರಸಂಕಿರಣಗಳ ಮೂಲಕ ಬೆಳಕನ್ನು ಬೀರುತ್ತಿದೆ. ಮೊದಲಿಗೆ ಗೋಟಗೋಡಿ ಜಾನಪದ ವಿವಿ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಇದು ಎರಡನೇ ಕಾರ್ಯಕ್ರಮವಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ದಾವಣಗೆರೆ ವಿವಿ ಉಪಕುಲಪತಿ ಡಾ. ಬಿ.ಡಿ. ಕುಂಬಾರ ಮಾತನಾಡಿ, ದಾವಣಗೆರೆಯಲ್ಲಿರುವ ದೃಶ್ಯಕಲಾ ಮಹಾವಿದ್ಯಾಲಯ ಖ್ಯಾತ ವಿದ್ಯಾಲಯವಾಗಿದ್ದು, ಇಲ್ಲಿ ಅಭ್ಯಾಸ ಮಾಡಿದ ಕಲಾವಿದರು ದೇಶ-ವಿದೇಶಗಳಲ್ಲಿ ತಮ್ಮ ಪ್ರತಿಭೆ ಮೂಲಕ ಗುರ್ತಿಸಿಕೊಂಡಿದ್ದಾರೆ. ಈ ದಿನ ದಾವಣಗೆರೆಯಲ್ಲಿ ಸಂಸ್ಕಾರ ಭಾರತಿ ಸಹಯೋಗದಲ್ಲಿ ರಾಜ್ಯಮಟ್ಟದ ಫೆಲೋಶಿಪ್ ಪ್ರದಾನ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳ ಕಲಿಕೆಯಲ್ಲಿ ಅಕ್ಷರಕ್ಕಿಂತ ಚಿತ್ರದ ಮೂಲಕ ಬೋಧಿಸಿದಾಗ ಬೇಗನೆ ಅರ್ಥವಾಗುತ್ತದೆ ಎಂಬುದು ಸಾಬೀತಾಗಿದೆ. ಶಿವರಾಮ ಕಾರಂತರ ಬಾಲಪ್ರಪಂಚ ಚಿತ್ರದ ಮೂಲಕವೇ ಬೋಧಿಸುವ ಧಾಟಿಯದಾಗಿತ್ತು ಎಂದು ಸ್ಮರಿಸಿದರು.
ಚಲನಚಿತ್ರ ನಟರು, ಸಂಸ್ಕಾರ ಭಾರತಿ ರಾಜ್ಯಾಧ್ಯಕ್ಷರು ಆದ ಸುಚೇಂದ್ರ ಪ್ರಸಾದ್ ಮಾತನಾಡಿ, ಕಲಾಯಾನ ಅಷ್ಟು ಸುಲಭದ ಕೆಲಸವಲ್ಲ. ಕಲೆ ಎಂಬುದು ಒಂದು ತಪಸ್ಸು. ಈ ದಿನ ಇಲ್ಲಿ ಸನ್ಮಾನಿತರಾದ ಸಾಧಕ ಕಲಾವಿದರನ್ನು ಹೆಕ್ಕಿ ತೆಗೆದಿದ್ದಾರೆ. ಇವರೆಲ್ಲರ ಕಲಾ ತಪಸ್ಸಿಗೆ ಸರ್ಕಾರದ ಫೆಲೋಶಿಪ್ ಮೂಲಕ ಅಧಿಕೃತ ಮೊಹರು ಬಿದ್ದಿದೆ ಎಂದು ಹೇಳಬಹುದು. ಇವರೆಲ್ಲರಿಗೂ ಸನ್ಮಾನಿಸುವ ಸುಯೋಗ ನಮ್ಮ ಸಂಸ್ಕಾರ ಭಾರತಿಗೆ ದೊರಕಿರುವುದು ಸುಕೃತವೇ ಸರಿ ಎಂದು ಸಂತಸ ವ್ಯಕ್ತಪಡಿಸಿದರು.
ಮೋಕ್ಷಕ್ಕೆ ಕಾರಣವಾದದ್ದೇ ನಿಜವಾದ ವಿದ್ಯೆ ಎನ್ನುತ್ತಾರೆ. ಕಲೆ, ಶಿಕ್ಷಣ ಇಲ್ಲದವರು ಪಶುವಿಗೆ ಸಮ ಎಂದು ಹೇಳುತ್ತಾರೆ. ಸಂಸ್ಕಾರ ಭಾರತೀ ಈ ನೆಲದ ಎಲ್ಲ ಲಲಿತಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಸದಾ ಜೊತೆ ನೀಡಲಿದೆ ಎಂದು ಹೇಳಿದರು.
ಡಯಟ್ ಉಪನಿರ್ದೇಶಕರಾಗಿದ್ದ ಹೆಚ್.ಕೆ. ಲಿಂಗರಾಜ್ ಮಾತನಾಡಿ, ಶಿಕ್ಷಣ ಎಂದರೇ ಬುದ್ಧಿಯ ಬಾಗಿಲುಗಳನ್ನು ತೆಗೆಯುವುದಾಗಿದೆಯೇ ಹೊರತು, ಸಿಕ್ಕಿದ್ದೆಲ್ಲಾ ತುರುಕುವುದಲ್ಲ ಕಲೆ ಮನುಷ್ಯನಲ್ಲಿ ಅಂತರ್ಗತವಾಗಿರುತ್ತದೆ. ಕಲೆ ಇದ್ದರೆ ಮಾತ್ರ ನಾಗರೀಕತೆ ಎಂದು ಹೇಳುವ ಮೂಲಕ ಕಲೆಯ ಮಹತ್ವವನ್ನು ಸಾರಿದರು.
ಅಕಾಡೆಮಿ ವತಿಯಿಂದ ಸಾಧಕ ಕಲಾವಿದರಾದ ಕಾಸರಗೋಡಿನ ಪಿ.ಎಸ್. ಪುಂಚಿತ್ತಾಯ, ಕಲಬುರ್ಗಿಯ ಪ್ರೊ. ವಿ.ಜಿ. ಅಂದಾನಿ, ರಾಯಚೂರಿನ ಹೆಚ್.ಹೆಚ್. ಮ್ಯಾದಾರ್, ಧಾರವಾಡದ ಎನ್.ಆರ್. ನಾಯ್ಕರ್, ತುಮಕೂರಿನ ಪ್ರಭು ಹರಸೂರು ಹಾಗೂ ಮೈಸೂರಿನ ಹರಿ ಅವರಿಗೆ ಫೆಲೋಶಿಪ್ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಜಮಖಂಡಿಯ ಹಿರಿಯ ಕಲಾವಿದ ವಿಜಯ ಸಿಂಧೂರ ಉಪಸ್ಥಿತರಿದ್ದು, ಮಾತನಾಡಿದರು. ಪ್ರತಿ ಕಲಾವಿದರಿಗೂ 2 ಲಕ್ಷ ರೂಪಾಯಿ ನಗದು ಪುರಸ್ಕಾರ ಹಾಗೂ ಸ್ಮರಣ ಫಲಕವನ್ನು ನೀಡಿ ಗೌರವಿಸಲಾಯಿತು.
ದೃಶ್ಯ ಕಲಾಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಸತೀಶ್ ವಲ್ಲೇಪುರೆ, ದಾ ವಿ ವಿ ಪ್ಯಷನ್ ಡಿಸೈನ್ ವಿಭಾಗದ ಡಾ.ಜೈರಾಜ್ ಚಿಕ್ಕ ಪಾಟೀಲ್, ದತ್ತಾತ್ರೇಯ ಭಟ್, ಶಿವಶಂಕರ್ ಸುತಾರ್, ಶಾಂತಯ್ಯ ಪರಡಿಮಠ, ನಾಗಭೂಷಣ, ನಾಗರಾಜ್ ,ನಾಡಿನ ಬೇರೆ ಬೇರೆ ಕಲಾಶಾಲೆಗಳಿಂದ ಆಗಮಿಸಿದ ಕಲಾವಿದ್ಯಾರ್ಥಿಗಳು,ಕಲಾಸಕ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಲು ಉದ್ದೇಶಿಸಿರುವ ಸುವರ್ಣ ಮಹೋತ್ಸವ ವಾರ್ಷಿಕ ಕಲಾಪ್ರದರ್ಶನ ಪೋಸ್ಟರ್ ಅನ್ನು ವೇದಿಕೆ ಮೇಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.
ಅಕಾಡೆಮಿ ರಿಜಿಸ್ಟಾರ್ ಆರ್. ಚಂದ್ರಶೇಖರ್, ಸದಸ್ಯ ಸಂಚಾಲಕಿ ಲಕ್ಷ್ಮೀ ಮೈಸೂರು ಕಾರ್ಯಕ್ರಮ ನಿರ್ವಹಿಸಿದರು. ಚಿತ್ರದುರ್ಗ ಸಂಸ್ಕಾರ ಭಾರತೀ ಕಾರ್ಯದರ್ಶಿ ರಾಜೀವಲೋಚನ, ಜಿಲ್ಲಾ ಸಂಸ್ಕಾರ ಭಾರತೀ ಅಧ್ಯಕ್ಷ ಎ. ಮಹಾಲಿಂಗಪ್ಪ, ಮಹಿಳಾ ಕಾರ್ಯದರ್ಶಿ ದೇವಿಕಾ ಸುನೀಲ್, ಖಜಾಂಚಿ ಬಿ. ದಿಳ್ಯಪ್ಪ, ಸಹ ಕಾರ್ಯದರ್ಶಿ ನಾಗಭೂಷಣ್, ಪದಾಧಿಕಾರಿಗಳಾದ ತಿಪ್ಪಣ್ಣ, ಶಾಂತಯ್ಯ ಪರಡಿಮಠ್, ಅಚ್ಯುತಾನಂದ, ಗುಡ್ಡಪ್ಪ, ಸತ್ಯಭಾಮಾ ಮಂಜುನಾಥ್, ರಾಮಚಂದ್ರಪ್ಪ, ಪಿ. ನಾಗರಾಜ್, ಸೇರಿದಂತೆ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ತ್ರಿವೇಣಿ, ಉಮಾ, ರುದ್ರಾಕ್ಷಿಬಾಯಿ ತಂಡದವರು ನಾಡಗೀತೆ ಹಾಡಿದರು. ಅಕಾಡೆಮಿ ಸದಸ್ಯ ಹನುಮಂತ ಮನತಟ್ಟಿ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯರಾದ ಎಂ.ಎಸ್. ನರಸಿಂಹ ಮೂರ್ತಿ ನಿರೂಪಿಸಿದರು. ರಮೇಶ್ ಚವ್ಹಾಣ್ ವಂದಿಸಿದರು.