ಸುದ್ದಿ360 ದಾವಣಗೆರೆ, ಆ.07: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಇಂದು ಶ್ರೀ ಎಚ್.ಡಿ. ದೇವೇಗೌಡ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಪ್ರಶಸ್ತಿಗೆ ಆಯ್ಕೆಯಾಗಿರುವ ಜನಪದ ಕ್ಷೇತ್ರದ ಶ್ರೇಷ್ಠ ಸಾಧಕ ಸಿದ್ಧನಮಠದ ಯುಗಧರ್ಮ ರಾಮಣ್ಣ, ಕೋವಿಡ್ ಸಂದರ್ಭದಲ್ಲಿ ಜನ ಮೆಚ್ಚುವಂತೆ ಸೇವೆ ಸಲ್ಲಿಸಿದ ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಡಿ.ಜಿ. ರಾಘವನ್ ಹಾಗೂ ಆಂಧ್ರಪ್ರದೇಶ ಮೂಲದ ಸಾಮಾಜಿಕ ಹೋರಾಟಗಾರ ಮಂದಕೃಷ್ಣ ಮಾದಿಗ ಈ ಮೂವರೂ ಸಾಧಕರು ಸಮಾಜಮುಖಿ ಕಾರ್ಯಗಳ ಮೂಲಕ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.
ಪ್ರತಿಷ್ಠಾನ ಸ್ಥಪಿಸಿದ ಆರಂಭದಲ್ಲಿ ದೇವೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಸಮಿತಿಯವರು ನಮ್ಮ ಬಳಿ ಬಂದಾಗ, ದೇಶದ ಪ್ರಧಾನಿ ಹುದ್ದೆ ಏರಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ರಾಜ್ಯದ ಏಕೈಕ ವ್ಯಕ್ತಿ ಎಂಬ ಖ್ಯಾತಿ ದೇವೇಗೌಡ ಅವರಿಗಿದೆ. ಈ ಹಿನ್ನೆಲೆಯಲ್ಲಿ ವರ್ಷಕ್ಕೆ ಕೇವಲ ಒಬ್ಬ ಶ್ರೇಷ್ಠ ಸಾಧಕರಿಗೆ ಪ್ರಶಸ್ತಿ ನೀಡಬೇಕು. ಯಾವುದೇ ಕಾರಣಕ್ಕೂ ಮಾಜಿ ಪ್ರಧಾನಿ ಹೆಸರಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಪ್ರತಿಷ್ಠಾನ ಇದುವರೆಗೂ ಅರ್ಹ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಕೊರೊನಾ ಕಾರಣದಿಂದಾಗಿ 2020, 2021ರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಮೂರೂ ವರ್ಷಗಳ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಂದಕೃಷ್ಣ ಮಾದಿಗ ಅವರು ಆಂಧ್ರಪ್ರದೇಶದಲ್ಲಿ ದಲಿತ, ದಮನಿತರ ಪರವಾಗಿ ಗಟ್ಟಿ ಧ್ವನಿಯಾಗಿ ನಿಂತಿದ್ದಾರೆ. ಅವರು ಹೈದರಾಬಾದ್‌ನಲ್ಲಿ ನಿಂತು ಒಂದು ಕರೆ ನೀಡಿದರೆ ಆಂಧ್ರ, ತೆಲಂಗಾಣ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕದ ಜನ ಕೂಡ ಅವರ ಹೋರಾಟಕ್ಕೆ ಕೈ ಜೋಡಿಸುತ್ತಾರೆ. ಕಾರಣಾಂತರಗಳಿಂದ ಅವರು ಪ್ರಶಸ್ತಿ ಸ್ವೀಕರಿಸಲು ಬಂದಿಲ್ಲ ಎಂದು ಕಾಶಂಪುರ್ ತಿಳಿಸಿದರು.
ಪ್ರತಿಷ್ಠಾನದ ವತಿಯಿಂದ ಶಿಕ್ಷಣ ಸಂಸ್ಥೆ ತೆರೆದು, ಅಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶವಿದೆ. ಹಂತ ಹಂತವಾಗಿ ಈ ಕಾರ್ಯಕ್ಕೆ ರಾಜ್ಯದೆಲ್ಲೆಡೆ ಚಾಲನೆ ನೀಡಲಾಗುವುದು. ಇದರೊಂದಿಗೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
-ಬಂಡೆಪ್ಪ ಕಾಶಂಪುರ್, ಗೌರವಾಧ್ಯಕ್ಷರು, ಎಚ್ ಡಿ ದೇವೇಗೌಡ ಪ್ರತಿಷ್ಠಾನ.
ಸಮಾರಂಭದಲ್ಲಿ ಜಾನಪದ ಚಿಂತಕ, ಸಾಹಿತಿ ಯುಗಧರ್ಮ ರಾಮಣ್ಣ ಹಾಗೂ ಕೊರೊನಾ ಸಮಯದಲ್ಲಿ ದಾವಣಗೆರೆ ಜಿಲ್ಲೆ ಜನರಿಗೆ ಅಭುತಪೂರ್ವ ಸೇವೆ ಸಲ್ಲಿಸಿದ ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಡಿ.ಜಿ ರಾಘವನ್ ಅವರಿಗೆ ಕ್ರಮವಾಗಿ 2021 ಹಾಗೂ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ ಗುಡ್ಡಪ್ಪ, ಕಾರ್ಯದರ್ಶಿ ಅನೀಸ್ ಪಾಷ, ಕೆ.ಪಿ. ನರಸಿಂಹ, ಸಿ.ಎಂ. ನಾಗರಾಜ್, ಹೊನ್ನಮ್ಮ ದೇವರಬೆಳಕೆರೆ, ಎಂ.ವಿ. ವೀರೇಶ್, ಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರ ರಾವ್, ವಿಜಯ್ ಕುಮಾರ್ ಇತರರಿದ್ದರು.