ಸುದ್ದಿ360 ದಾವಣಗೆರೆ, ಆ.25: 2021-22ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಐಚ್ಛಿಕ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ದಾವಣಗೆರೆ ವಲಯ ಮಟ್ಟದ ಪ್ರತಿಭಾ ಪುರಸ್ಕಾರ ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಸಮಾರಂಭ ಆ. 28 ರಂದು ಜಿಲ್ಲಾ ಗುರುಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣ ಗೌಡ) ಬಣ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಕಳೆದ ಏಳು ವರ್ಷದಿಂದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲಾಗುತ್ತಿದೆ. ಈ ಬಾರಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯಕ್ಕೆ ಸೀಮಿತವಾಗಿ 188 ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಯಾವುದೇ ಅರ್ಜಿ ಆಹ್ವಾನಿಸದೆ, ಶಿಕ್ಷಣ ಇಲಾಖೆಯಿಂದ ಪಡೆದ ಮಾಹಿತಿ ಅನುಸಾರವಾಗಿ ಆಯ್ಕೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳು ಆಧಾರ್ ಮತ್ತು ಅಂಕಪಟ್ಟಿ ತರಬೇಕು ಎಂದು ಮನವಿ ಮಾಡಿದರು.
ಭಾನುವಾರ ಬೆಳಗ್ಗೆ 11.30ಕ್ಕೆ ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಡಾ. ಎಂ. ಸೋಮಶೇಖರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ನಿರಂಜನಮೂರ್ತಿ, ಟಿ. ಅಂಬಣ್ಣ, ನರೇಂದ್ರಕುಮಾರ್, ಬಸಮ್ಮ, ಎನ್. ವಾಸುದೇವ ರಾಯ್ಕರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಸಾವಿತ್ರಿಬಾಯಿ ಪುಲೆ ಪ್ರಶಸ್ತಿ
ವೇದಿಕೆಯಿಂದ ಕಳೆದ ವರ್ಷ ಆಯೋಜಿಸಿದ್ದ ಜೆ.ಎಚ್. ಪಟೇಲ್ ಜಯಂತಿ ಕೊರೊನಾ ಕಾರಣಕ್ಕೆ ನಡೆಯಲಿಲ್ಲ. ಹಾಗಾಗಿ ಈ ಬಾರಿ ನಿವೃತ್ತ ಪ್ರಾಚಾರ್ಯ ಕೆ. ಇಮಾಮ್ ಅವರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ನೀಡಲಾಗುವುದು.
ಸನ್ಮಾನ ಕಾರ್ಯಕ್ರಮ:
ಸಮಾಜ ಸೇವಾ ಕ್ಷೇತ್ರದಲ್ಲಿ ಎಂ. ಇಂದ್ರಪ್ಪ, ಜೆ. ಅಮಾನುಲ್ಲಾಖಾನ್, ಯೋಗ ಕ್ಷೇತ್ರದಲ್ಲಿ ಪ್ರಕಾಶ್ ಉತ್ತಂಗಿ, ಸಾಹಿತ್ಯ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ಕಡಕೋಳ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಬಸವರಾಜ ದೊಡ್ಮನಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪಿ. ಕಾಡಜ್ಜಿ ಮಂಜುನಾಥ್, ಛಾಯಾಗ್ರಾಹಕ ಕ್ಷೇತ್ರದಲ್ಲಿ ಚನ್ನಬಸವ ಶೀಲವಂತ್, ಕನ್ನಡ ಪರ ಹೋರಾಟ ಕ್ಷೇತ್ರದಲ್ಲಿ ಪಿ. ಮಂಜುನಾಥ್, ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಗೆ ಎಸ್. ಪ್ರೇಮಾ ಅವರಿಗೆ ಸನ್ಮಾನ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮಹೇಶಪ್ಪ, ಲೋಕೇಶ್, ಜಬೀವುಲ್ಲಾ, ಪರಮೇಶ್, ಸಂತೋಷ್, ರವಿಕುಮಾರ್, ಬಾಷಾಸಾಬ್ ಇತರರು ಇದ್ದರು.