15 ಸೆಕೆಂಡ್ ಗಳಲ್ಲಿ ಧರೆಗುರುಳಲಿವೆ 40 ಅಂತಸ್ತಿನ ಸೂಪರ್‌ಟೆಕ್ ಅವಳಿ ಗೋಪುರಗಳು !!!

ಧರೆಗುರುಳಲು ಕ್ಷಣಗಣನೆಯಲ್ಲಿರುವ ಸೂಪರ್‌ಟೆಕ್ ಅವಳಿ ಗೋಪುರಗಳು

ಸುದ್ದಿ360 ನೋಯ್ಡ, ಆ.26: ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತೀರಿ. ಅಂತೆಯೇ 2004ರಲ್ಲಿ ಪ್ರಾರಂಭವಾದ ಯೋಜನೆಯಿಂದ ಹಲವರ ಕನಸಿನ ಮನೆಯಾಗಬೇಕಿದ್ದ ವಸತಿ ಸಮುಚ್ಛಯ ಇದೀಗ ನೆಲಸಮಗೊಳ್ಳಲು ಕ್ಷಣಗಣನೆಯಲ್ಲಿದೆ.

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 93ರಲ್ಲಿನ ಅಪೆಕ್ಸ್ ಮತ್ತು ಸಿಯಾನ್ ಹೆಸರಿನ ಸೂಪರ್‌ಟೆಕ್ ಅವಳಿ ಗೋಪುರಗಳ ಅಸ್ತಿತ್ವ ಆಗಸ್ಟ್ 28 ರ ಮಧ್ಯಾಹ್ನ 2.30ರ ವರೆಗೆ ಮಾತ್ರ ನಂತರದ 15 ಸೆಕೆಂಡ್ ಗಳಲ್ಲಿ ಈ ಗೋಪುರಗಳು ನೆಲಸಮಗೊಳ್ಳಲಿವೆ.

ಸೂಪರ್ ಟೆಕ್ ಎಮೆರಾಲ್ಡ್ ಕೋರ್ಟ್ ಹೌಸಿಂಗ್ ಸೊಸೈಟಿಯ ಈ ಅವಳಿ ಕಟ್ಟಡಗಳಲ್ಲಿ ಒಂದು 103 ಮೀಟರ್ ಎತ್ತರವಿದ್ದರೆ, ಇನ್ನೊಂದು 97 ಮೀಟರ್ ಎತ್ತರವಿದ್ದು, 40 ಅಂತಸ್ತುಗಳನ್ನೊಳಗೊಂಡಿದೆ. ಕಟ್ಟಡ ನಿರ್ಮಿಸಲು ಬರೋಬ್ಬರಿ 70 ಕೋಟಿ ರೂ ವೆಚ್ಚವಾಗಿದೆ. ಇದೀಗ ಇದನ್ನು ನೆಲಸಮಗೊಳಿಸಲು 20 ಕೋಟಿ ವ್ಯಯಿಸಲಾಗುತ್ತಿದೆ. ಇಷ್ಟು ದುಬಾರಿ ಕಟ್ಟಡ ಕೆಡವಲು ಕಾರಣವಾದರೂ ಏನು, ಅದೂ ಕೇವಲ 15 ಸೆಕೆಂಡ್ ಗಳಲ್ಲಿ ಈ ಬೃಹತ್ ಕಟ್ಟಡ ಧರೆಗುರುಳುವುದಾದರೂ ಹೇಗೆ… ಸುತ್ತಮುತ್ತಲಿನ ಪರಿಸರ, ಕಟ್ಟಡಗಳ ಗತಿ ಏನು ಎಂಬುದು ನಿಮ್ಮ ಕುತೂಹಲವಾದರೆ, ಇಲ್ಲಿದೆ ಒಂದು ಇಂಟೆರೆಸ್ಟಿಂಗ್ ಸ್ಟೋರಿ…

ಅಕ್ರಮವಾಗಿ ನಿರ್ಮಿಸಲಾಗಿರುವುದೇ ಈ ಅವಳಿ ಕಟ್ಟಡಗಳನ್ನು ಕೆಡವಲು ಮುಖ್ಯ ಕಾರಣ. ಕಟ್ಟಡಗಳ ನಿರ್ಮಾಣವು ಕನಿಷ್ಠ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕಟ್ಟಡಗಳನ್ನು ಕೆಡವಲು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಪ್ರಕಾರ, ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ವೈಯಕ್ತಿಕ ಫ್ಲಾಟ್ ಮಾಲೀಕರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.

ಇನ್ನು ಈ ಗೋಪುರಗಳನ್ನು ಕೆಡವಲು, ಪಲ್ವಾಲ್ (ಹರಿಯಾಣ) ನಿಂದ ತರಲಾದ ಸುಮಾರು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದು ಡೈನಮೈಟ್, ಎಮಲ್ಷನ್ ಮತ್ತು ಪ್ಲಾಸ್ಟಿಕ್ ಸ್ಫೋಟಕಗಳ ಮಿಶ್ರಣವಾಗಿದ್ದು, ಮುಂಬೈನ ಎಡಿಫೈಸ್ ಇಂಜಿನಿಯರಿಂಗ್ ಕಂಪನಿ ಈ ಕಾರ್ಯಾಚರಣೆಯ ನೇತೃತ್ವ ಹೊಂದಿದೆ.

ಸುಮಾರು 100 ಕಾರ್ಮಿಕರು ಡೆಮಾಲಿಷನ್ ತಂಡದ ಭಾಗವಾಗಿದ್ದಾರೆ. ಭಾರತದ ಬ್ಲಾಸ್ಟರ್ ಚೇತನ್ ದತ್ತಾ ಆಗಸ್ಟ್ 28 ರಂದು ಮಧ್ಯಾಹ್ನ 2.30 ಕ್ಕೆ ಸ್ಫೋಟದ ಜೋಡಣೆಯ ಬಟನ್ ಒತ್ತಲಿದ್ದಾರೆ. ಸುಮಾರು 10 ಸೆಕೆಂಡುಗಳಲ್ಲಿ ಜೋಡಿಸಿರುವ ಎಲ್ಲಾ ಸ್ಪೋಟಕಗಳು ಸ್ಪೋಟಗೊಳ್ಳಲಿದ್ದು, 5 ಸೆಕೆಂಡ್ಗಳಲ್ಲಿ ಸಂಪೂರ್ಣ ಕಟ್ಟಡ ಧರೆಗುರುಳಲಿದೆ.

ಸೂಪರ್‌ಟೆಕ್ ಸುಮಾರು 5 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ ಮತ್ತು ಉಳಿದ ಸುಮಾರು 15 ಕೋಟಿ ರೂಪಾಯಿಗಳನ್ನು ಕಟ್ಟಡದ ಅವಶೇಷಗಳಿಂದ ಭರಿಸಲಾಗಿದೆ. ಕಟ್ಟಡದ ಅವಶೇಷ ಸುಮಾರು 4,000 ಟನ್ ಉಕ್ಕು ಸೇರಿದಂತೆ 5,000 ಟನ್ ಆಗಿರುತ್ತದೆ.

ಜಲಪಾತದ ಸ್ಫೋಟ ವಿಧಾನವನ್ನು ಗೋಪುರಗಳನ್ನು ಉರುಳಿಸಲು ಬಳಸಲಾಗುತ್ತದೆ. ಇದರಿಂದ ಕಟ್ಟಡಗಳು ನೇರವಾಗಿ ಧರೆಗೆ ಒಳಮುಖವಾಗಿ ಬೀಳುತ್ತವೆ. ಇದು 55,000 ಟನ್‌, ಸುಮಾರು 3 ಸಾವಿರ ಟ್ರಕ್ ಗಳಷ್ಟು ಕಟ್ಟಡ ಅವಶೇಷಗಳು ಸ್ಥಳದಲ್ಲಿ ಉಳಿಯಲಿದೆ. ಇದನ್ನು ತೆರವುಗೊಳಿಸಲು 3 ತಿಂಗಳ ಸಮಯ ತೆಗೆದುಕೊಳ್ಳುತ್ತದೆ.

ಕೆಡವಲು ಸುರಕ್ಷತಾ ಕ್ರಮಗಳು

  • ಕಟ್ಟಡ ತರವಿಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ (ಆಗಸ್ಟ್ 28) ಸುತ್ತಮುತ್ತಲಿನ ನಿವಾಸಿಗಳನ್ನು ಒಂದು ಸಂಜೆ ಮೊದಲು ಅಥವಾ ಬೆಳಿಗ್ಗೆ 7 ಗಂಟೆಗೆ ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.
  • ಧ್ವಂಸಗೊಳಿಸಲಿರುವ ಈ ಗೋಪುರಕ್ಕೆ ಕೇವಲ 9 ಮೀ ಅಂತರದಲ್ಲಿ ಎರಡು ಅಪಾರ್ಟ್ಮೆಂಟಗಳಲಿದ್ದು ಇವುಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕಾರ್ಯಾಚರಣೆ ಮಾಡುವುದು ಸಹ ನೇತೃತ್ವ ವಹಿಸಿರುವ ಕಂಪನಿಗೆ ದೊಡ್ಡ ಸವಾಲಾಗಿದೆ.
  • ಕಟ್ಟಡಗಳನ್ನು ಉರುಳಿಸುವ ಜವಾಬ್ದಾರಿ ಹೊತ್ತಿರುವ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಯು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿದಲ್ಲಿ 100 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ.
  • ಸ್ಥಳದ ಸಮೀಪ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಯಾವುದೇ ಅಹಿತಕರ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಯೋಜನೆಯನ್ನು ಸಿದ್ಧಪಡಿಸಲಾಗಿದೆ.
  • ಈ ಸಂದರ್ಭದಲ್ಲಿ ನೋಯ್ಡಾ ಎಕ್ಸ್ಪ್ರೆಸ್ ಕೂಡ ತನ್ನ ಸಂಚಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಲಿದೆ. ಎಂಬುದಾಗಿ ನೋಯ್ಡಾ ಡಿಸಿಪಿ (ಟ್ರಾಫಿಕ್ ) ಗಣೇಶ್ ಶಾ ಮಾಹಿತಿ ನೀಡಿದ್ದಾರೆ.
admin

admin

Leave a Reply

Your email address will not be published. Required fields are marked *

error: Content is protected !!