ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ‘ತುಂಗಾ’ ಇನ್ನು ನೆನಪು ಮಾತ್ರ – ಸರಕಾರಿ ಗೌರವದೊಂದಿಗೆ ವಿದಾಯ

650 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಹಾಜರಾಗಿದ್ದ ‘ತುಂಗಾ’

ಸುದ್ದಿ 360, ದಾವಣಗೆರೆ ಆ.26: ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ತುಂಬಲಾರದ ನಷ್ಟ ಎಂದರೆ ತಪ್ಪಾಗದು. ಪೊಲೀಸ್ ಕುಟುಂಬದ ಕಣ್ಮಣಿ, ಅಧಿಕಾರಿಗಳು, ಸಿಬ್ಬಂದಿಯ ಅಚ್ಚುಮೆಚ್ಚಿನ ಶ್ವಾನ ‘ತುಂಗಾ’ ಇಂದು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ.

ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸಿರುವ ತುಂಗಾ (ಡಾಬರ್‌ಮನ್ ತಳಿಯ ಶ್ವಾನ), ಹತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನದೇ ಆದ ಸೇವೆ ಸಲ್ಲಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ ಅಪರಾಧಿಗಳಿಗೆ ಸಿಂಹಸ್ವಪ್ನದಂತಿದ್ದಳು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತುಂಗಾ, ತನ್ನ ಕೊನೆಯ 15 ದಿನಗಳನ್ನು ಆಸ್ಪತ್ರೆಯಲ್ಲಿ ಸವೆಸಿದ್ದಾಳೆ. ತುಂಗಾಗೆ ಕ್ಯಾನ್ಸರ್ ಆಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಶ್ವಾನಗಳು ಗರಿಷ್ಠ 13ರಿಂದ 15 ವರ್ಷ ಬದುಕುತ್ತವೆ. ವಯಸ್ಸು 13 ಆಗಿದ್ದರೂ ತುಂಗಾ ಅತ್ಯಂತ ಕ್ರಿಯಾಶೀಲವಾಗಿದ್ದಳು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತುಂಗಾ ತನ್ನ ಶ್ವಾನದಳದ ಇತರೆ ಸದಸ್ಯರೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದಳು. ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ನಗರದ ನಾಗರಿಕರ ಮನ ಗೆದ್ದಿದ್ದಳು. ಆಕೆಯ ಚಾಕಚಕ್ಯತೆ, ಚಾಣಾಕ್ಷತೆ ಕಂಡು ಜನ ತಲೆದೂಗಿದ್ದರು.

ಅಪರಾಧ ತನಿಖಾ ದಳದ ಶ್ವಾನ ತುಂಗಾಗೆ ದಾವಣಗೆರೆಯ ಡಿಎಆರ್ ಮೈದಾನದಲ್ಲಿ ಶುಕ್ರವಾರ ಎಸ್.ಪಿ. ಸಿಬಿ. ರಿಷ್ಯಂತ್ ಅಂತಿಮ ನಮನ ಸಲ್ಲಿಸಿದರು.

ಸರಕಾರಿ ಗೌರವದೊಂದಿಗೆ ವಿದಾಯ:

ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಸ್‌ಪಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ತುಂಗಾ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಗಾರ್ಡ್ ಆಫ್ ಹಾನರ್ ಮೂಲಕ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೈದಾನದಲ್ಲೇ ಶವ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಪಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ, ಡಿವೈಎಸ್‌ಪಿ ಬಸವರಾಜ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪೊಲೀಸ್ ಇಲಾಖೆಯ ಒಂದು ಭಾಗವಾಗಿ ತುಂಗಾ . . .

ತುಂಗಾ 3 ತಿಂಗಳ ಮರಿ ಇದ್ದಾಗಿನಿಂದಲೇ ಪೊಲೀಸ್ ಇಲಾಖೆಗೆ ಪಾದಾರ್ಪಣೆ ಮಾಡಿದ್ದು, ಇಲಾಖೆಯ ಒಂದು ಭಗವಾಗಿ ತರಬೇತಿ ಪಡೆದಳು. 2010ರಿಂದ ಸತತ 13 ವರ್ಷಗಳ ಕಾಲ ಪೊಲೀಸ್ ಇಲಾಖೆಗೆ ತನ್ನ ಅಮೂಲ್ಯ ಸೇವೆ ಸಲ್ಲಿಸಿದ್ದಾಳೆ. ತುಂಗಾ 650 ಕ್ಕೂ ಹೆಚ್ಚು ಪ್ರಕರಣಗಳಿಗೆ ಹಾಜರಾಗಿದ್ದು ಅದರಲ್ಲಿ 106 ಪ್ರಕರಣಗಳನ್ನು ಭೇದಿಸಿದ್ದಾಳೆ. ಅದರಲ್ಲಿ 71 ಕೊಲೆ ಪ್ರಕರಣ ಮತ್ತು 35 ಕಳ್ಳತನ ಮತ್ತು ದರೋಡೆ ಪ್ರಕರಣಗಳಾಗಿವೆ. ಇವುಗಳಲ್ಲಿ 6 ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯಾಗಿದೆ ಮತ್ತು 04 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ.

ತುಂಗಾಳಿಗೆ ಬಂದಂತಹ ಪ್ರಶಂಸನೆ ಮತ್ತು ಬಹುಮಾನಗಳು

1) 2020 ರಲ್ಲಿ ಜಿಲ್ಲಾ ಪೊಲೀಸ್ ಕಛೇರಿ ದಾವಣಗೆರೆಯಲ್ಲಿ ಶ್ರೀ ಅಮರ ಕುಮಾರ್ ಪಾಂಡೆ, ಐಪಿಎಸ್ ಮಾನ್ಯ ಎಡಿಜಿಪಿ ಕಾನೂನು ಸುವ್ಯವಸ್ಥೆ ಬೆಂಗಳೂರು ರವರು ಸನ್ಮಾನಿಸಿ ಶ್ಲಾಘನೀಯ ಪತ್ರವನ್ನು ನೀಡಿರುತ್ತಾರೆ.

2) 2020 ರಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 74ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ್ ರವರು ಸನ್ಯಾಸಿರುತ್ತಾರೆ.

3) 2021 ರಲ್ಲಿ ದಾವಣಗೆರೆ ನಗರದಲ್ಲಿ ನಡೆದ “ಆಹಾದ್ ಕಾ ಅಮೃತ್ ಮಹೋತ್ಸವ್” ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಮತ್ತು ಮಾನ್ಯ ಪೊಲೀಸ್ ಅಧೀಕ್ಷರು ದಾವಣಗೆರೆ ಜಿಲ್ಲೆ ಹಾಗೂ ದಾವಣಗೆರೆ ನಗರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಸನ್ಯಾಸಿ ಪ್ರಶಂಸನಾ ಪತ್ರ ನೀಡಿರುತ್ತಾರೆ.

ತುಂಗಾ ಭೇಧಿಸಿದ ಪ್ರಮುಖ ಪ್ರಕರಣಗಳು

  • ದಿನಾಂಕ: 24/01/2018 ರ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತುಂಗಾ ಶ್ವಾನವು ಕೃತ್ಯ ನಡೆದ ಸ್ಥಳದಿಂದ ಕೆಂಪು ಹಂಚಿನ ಮತ್ತು ಬಿರುವಿನ ವಾಸನೆ ಗ್ರಹಿಸಿಕೊಂಡು ಮನೆಯ ಹೊರಗೆ ಮತ್ತು ಒಳಗೆ ಸುತ್ತಾಡಿ ಜನರ ಮಧ್ಯೆ ಇದ್ದ ವೀರಪ್ಪನ ಮಗನಾದ ಶಿವಕುಮಾರನನ್ನು ಗುರುತಿಸಿ ಆರೋಪಿಯನ್ನ ಪತ್ತೆ ಮಾಡಿರುತ್ತದೆ.
  • ದಿನಾಂಕ: 27/10/2018 ರ ಹರಿಹರ ನಗರ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತುಂಗಾ ಶ್ವಾನವು ಕೃತ್ಯ ನಡೆದ ಸ್ಥಳದಿಂದ ವಾಸನೆ ಗ್ರಹಿಸಿಕೊಂಡು 3 ಕಿ.ಮೀ ದೂರ ಸಾಗಿ ಮಹಾತ್ಮ ಗಾಂಧಿ ಕೊಳಗೆರೆ ಪ್ರದೇಶದಲ್ಲಿರುವ ಆರೋಪಿ ಹುಚ್ಚ ಅರುಣನ ಮನೆ ಗುರುತಿಸಿದೆ.
  • ದಿನಾಂಕ: 10/07/2019 ರ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತುಂಗಾ ಶ್ವಾನವು ಕೃತ್ಯ ನಡೆದ ಸ್ಥಳದಿಂದ ವಾಸನೆ ಗ್ರಹಿಸಿಕೊಂಡು ಸೂಳೆಕೆರೆ ಕೆಳಗೆ ಇಂದು 11 ಕಿ.ಮೀ ದೂರ ಸಾಗಿ ಕಾಶಿಪುರ ತಾಂಡಾದಲ್ಲಿದ್ದ ಚೇತನ್ ಎಂಬ ಆರೋಪಿಯನ್ನು ಪತ್ತೆ ಮಾಡಿರುತ್ತದೆ.
  • ದಿನಾಂಕ: 19/05/2019 ರ ದಾ.ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತುಂಗಾ ಶ್ವಾನವು ಕೃತ್ಯ ನಡೆದ ಸ್ಥಳದಿಂದ ವಾಸನೆ ಗ್ರಹಿಸಿಕೊಂಡು ಮನೆಯ ಸುತ್ತಮುತ್ತ ತಿರುಗಾಡಿ ಕಕ್ಕರಗೊಳ್ಳದಲ್ಲಿರು ರೇವಣಸಿದ್ದಪ್ಪ ಎಂಬ ಆರೋಪಿಯ ಮನೆಯನ್ನು ಗುರುತಿಸಿ ಆರೋಪಿಯನ್ನು ಪತ್ತೆ ಮಾಡಿರುತ್ತದೆ.
  • ದಿನಾಂಕ: 24/06/2022 ರ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತುಂಗಾ ಶ್ವಾನವು ಕೃತ್ಯ ನಡೆದ ಸ್ಥಳದಿಂದ ವಾಸನೆ ಗ್ರಹಿಸಿಕೊಂಡು ಮನೆಯ ಸುತ್ತಮುತ್ತ ತಿರುಗಾಡಿ ನಂತರ 100 ಮೀಟರ್ ದೂರದಲ್ಲಿ ಇರುವ ಹರೀಶ್ ಎಂಬಾತನ ಮನೆಯ ಬಚ್ಚಲು ಮನೆಗೆ ಹೋಗಿ ಆರೋಪಿಯ ಪ್ರಮುಖ ಸುಳಿವು ನೀಡಿರುತ್ತದೆ.
ನ್ಯಾಷನಲ್ ಪೊಲೀಸ್ ಕೆ9 ಜರ್ನಲ್  ವರದಿಯಲ್ಲಿ ತುಂಗಾ

https://www.mha.gov.in/sites/default/files/NationalPoliceK9JournalVol_I_09062021_1.pdf

admin

admin

Leave a Reply

Your email address will not be published. Required fields are marked *

error: Content is protected !!