ಸುದ್ದಿ360 ದಾವಣಗೆರೆ, ಆ.27: ವಿಶ್ವದಲ್ಲೇ ಅತ್ಯುತ್ತಮವಾಗಿರುವ ರೆಡಿಯೋಥೆರಪಿ ಚಿಕಿತ್ಸೆ ಈಗ ಮಧ್ಯ ಕರ್ನಾಟಕದಲ್ಲಿ ಲಭ್ಯವಿರುವುದಾಗಿ ದಾವಣಗೆರೆಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಕನ್ಸಲ್ಟಂಟ್ ಹೆಡ್ ಡಾ. ಜಗದೀಶ ತುಬಚಿ ಹೇಳಿದರು.
ನಗರ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಯಂತ್ರ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಈ ಮೊದಲು ಕ್ಯಾನ್ಸರ್ ರೆಡಿಯೋಥೆರಪಿ ಚಿಕಿತ್ಸೆ ಪಡೆಯಲು ರಾಜ್ಯದ ಜನ ಬೆಂಗಳೂರು, ಚೆನ್ನೈ, ಹೈದರಾಬಾದ್‌ಗೆ ಹೋಗಬೇಕಿತ್ತು. ಆದರೆ ಈ ಮಹಾನಗರಗಳಲ್ಲಿ ಇರುವ ಯಂತ್ರಗಳಿಗಿಂತಲೂ ಅತ್ಯಾಧುನಿಕವಾಗಿರುವ ರೆಡಿಯೋಥೆರಪಿ ಯಂತ್ರ ಪ್ರಸ್ತುತ ವಿಶ್ವಾರಾಧ್ಯ ಆಸ್ಪತ್ರೆಯಲ್ಲಿದೆ. ವಿಶ್ವದಲ್ಲೇ ಅತ್ಯುತ್ತಮವಾಗಿರುವ ರೆಡಿಯಾಕ್ಸಾಕ್ಟ್ ಟೊಮೋಥೆರಪಿ ಯಂತ್ರ ಅಳವಡಿಸಲಾಗಿದ್ದು, ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಥೆರಪಿಯ ವಿಶೇಷತೆ ?
ಸಾಮಾನ್ಯವಾಗಿ ಕ್ಯಾನ್ಸರ್‌ನ ಹಂತ ಹಾಗೂ ಗಂಭೀರತೆ ರೇಡಿಯೋ ಥೆರಪಿಯ ಸಮಯವನ್ನು ನಿರ್ಧರಿಸುತ್ತದೆ. ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ದೇಹದಿಂದ ಬೇರ್ಪಡಿಸಿ, ಬಳಿಕ ಉಳಿದ ಹುಣ್ಣಿಗೆ ರೆಡಿಯೊಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ ಹೆಚ್ಚಾಗಿದ್ದರೆ 35 ದಿನಗಳ ಕಾಲ ನಿರಂತರ ಥೆರಪಿ ಅಗತ್ಯವಿರುತ್ತದೆ. ಹಿಂದೆಲ್ಲಾ ಇಡೀ ದೇಹಕ್ಕೆ ರೇಡಿಯೇಷನ್ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ನಮ್ಮ ಬಳಿ ಇರುವ ಯಂತ್ರವು ನಿರ್ಧಿಷ್ಟ ಭಾಗಕ್ಕೆ ಮಾತ್ರ ರೇಡಿಯೇಷನ್ ಚಿಕಿತ್ಸೆ ನೀಡುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಲಭ್ಯವಿರುವ ರೆಡಿಯೇಷನ್ ಥೆರಪಿಗಳಲ್ಲೇ ಟೊಮೊಥೆರಪಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದಕ್ಕೆ 40,000 ರೂ.ನಿಂದ 5 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ ಎಂದು ಡಾ. ಜಗದೀಶ ತುಬಚಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ವಿವಿಧ ರೀತಿಯ ಸ್ಯಾನಿಂಗ್, ವೈದ್ಯಕೀಯ ಸೌಲಭ್ಯ ಹೆಚ್ಚಾಗಿರುವ ಕಾರಣ ಕ್ಯಾನ್ಸರ್ ಪತ್ತೆ ಕಾರ್ಯ ಸುಲಭವಾಗಿದೆ. ಇದರಿಂದ ದೇಶದಾದ್ಯಂತ ದಿನವೊಂದಕ್ಕೆ 300 ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ, ಅದರಲ್ಲೂ ನಮ್ಮ ಭಾಗದಲ್ಲಿ ಬಾಯಿ, ಸ್ಥನ ಹಾಗೂ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಪ್ರಸ್ತುತ ಅಳವಡಿಸಿರುವ ನೂತನ ಯಂತ್ರದ ಮೂಲಕ ರಕ್ತ ಕ್ಯಾನ್ಸರ್ ಹೊರತುಪಡಿಸಿ ಬೇರೆಲ್ಲ ರೀತಿಯ ಕ್ಯಾನ್ಸರ್‌ಗೆ ಟೊಮೊಥೆರಪಿ ಮಾಡಬಹುದು. ದಿನವೊಂದಕ್ಕೆ 100ಕ್ಕೂ ಅಧಿಕ ರೋಗಿಗಳಿಗೆ ಈ ಒಂದು ಯಂತ್ರದ ಮೂಲಕ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ವೈದ್ಯರಾದ ಡಾ.ಕೆ. ಪ್ರಜ್ವಲ್, ಡಾ.ಎ.ಸಿ. ಮಹಾಂತೇಶ್, ಡಾ. ತೇಜಸ್ ಎ. ಯಳಮಲಿ ಇದ್ದರು.