ಸುದ್ದಿ360 ದಾವಣಗೆರೆ, ಆ.27: ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವ ಪ್ರಧಾನ ಮಂತ್ರಿ ಮೋದಿಯವರು, ಕರ್ನಾಟಕದಲ್ಲಿನ ಕಮೀಷನ್ ದಂಧೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎಸ್ ಡಿ ಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರು ಪ್ರಧಾನಿಯವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರೂ ಸ್ಪಂದಿಸದ ಪ್ರಧಾನಿಯವರ ಕುಮ್ಮಕ್ಕು 40 ಪರ್ಸೆಂಟ್ ಗಿಂತಲೂ ಹೆಚ್ಚುತ್ತಿರುವ ಕಮೀಷನ್ ವ್ಯವಹಾರಕ್ಕೆ ಕುಮ್ಮಕ್ಕು ಇರುವುದಾಗಿ ಆರೋಪಿಸುವ ಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದರು.
ಸರ್ಕಾರಿ ಉದ್ಯೋಗಗಳಲ್ಲಿನ ನೇಮಕಾತಿಯಲ್ಲಿನ ಭ್ರಷ್ಟಾಚಾರ, ಉಪನ್ಯಾಸಕರ ನೇಮಕಾತಿ ಸೇರಿದಂತೆ ಕೆಪಿಎಸ್ ಸಿಯ ಪ್ರತಿ ನೇಮಕಾತಿಯಲ್ಲೂ ಬ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಬಿಜೆಪಿ ಸರ್ಕಾರವೇ ಮುಂದೆ ನಿಂತು ಕೋಮು ವೈಷಮ್ಯವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಕೋಮುದ್ವೇಷದ ಕೊಲೆಗಳು ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಯಾವ ಕ್ಷಣದಲ್ಲಿ ಯಾರ ಹೆಣ ಬೀಳುವುದೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ನೆರೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದಲ್ಲೂ ಇವರದ್ದೇ ಬಿಜೆಪಿ ಸರ್ಕಾರ ಇದ್ದರೂ, ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಇದ್ದಾಗ್ಯೂ ಕೇಂದ್ರದಿಂದ ರಾಜ್ಯಕ್ಕೆ ನೆರೆ ಪರಿಹಾರ ತರಲು ಇವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ತಮ್ಮ ಶೋಕಿಗಾಗಿ ಶಾಸಕರು ಮತ್ತು ಮಂತ್ರಿಗಳಿಗೆ ಐಷಾರಾಮಿ ಕಾರು ಖರೀದಿಗೆ ಅನುಮೋದನೆ ಕೊಟ್ಟಿದ್ದಾರೆ. ಈ ಸರ್ಕಾರಕ್ಕೆ ಮಾನವಿಯತೆಯೇ ಇಲ್ಲ ಎಂದು ಕಿಡಿಕಾರಿದರು.
ವಿರೋಧ ಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ?
ಈ ಸರ್ಕಾರ ಇಷ್ಟೆಲ್ಲಾ ಅನೀತಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಸಹ ಈ ದೇಶದ ಭ್ರಷ್ಟಾಚಾರದ ಪಿತಾಮಹ ಎಂದು ಕರೆಯಬಹುದಾದ, ಸದ್ಯಕ್ಕೆ ಕರ್ನಾಟಕದ ಮುಖ್ಯ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಏನು ಮಾಡುತ್ತಿದೆ? ಮುಂದೆ ತಾವು ಅಧಿಕಾರಕ್ಕೆ ಬಂದರೆ ಈ ಒಂದು ಫಲವತ್ತಾದ 40% ಕಮಿಷನ್ ಫಸಲನ್ನು ಉಳಿಸಿಕೊಂಡು ಹೋಗುವ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆಯಾ? ಇನ್ನೂ ಚುನಾವಣೆಗೆ ಸುಮಾರು ಹತ್ತು ತಿಂಗಳಿದ್ದರೂ ಈಗಿನಿಂದಲೇ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಧ್ರುವೀಕರಣದ ಬಗ್ಗೆಯಾಗಲಿ, ಭ್ರಷ್ಟಾಚಾರದ ವಿಷಯವಾಗಲಿ ಅಥವಾ ಜನರನ್ನು ಕಾಡುತ್ತಿರುವ ಬೆಲೆ ಏರಿಕೆಯಂತಹ ಯಾವುದೇ ವಿಚಾರಗಳ ಬಗ್ಗೆಯಾಗಲಿ, ವಿರೋಧ ಪಕ್ಷವಾಗಿ ಬೀದಿಗೆ ಇಳಿಯಬೇಕಾಗಿದ್ದ ಕಾಂಗ್ರೆಸ್ ಪಕ್ಷ, ಇದೆಲ್ಲವನ್ನು ಮರೆತು ತನ್ನ ಅಂತರಿಕ ಕಚ್ಚಾಟದಲ್ಲಿ ತೊಡಗಿಕೊಂಡಿದೆ. ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದಾಗ ಅಬ್ಬರಿಸಿ ಗುಡುಗಿದ ರೀತಿಯಲ್ಲಿ ಸಿದ್ದರಾಮಯ್ಯನವರು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಏಕೆ? ಸೋನಿಯಾ, ರಾಹುಲ್ ಗಾಂಧಿಯವರಿಗೆ ಇಡಿ ನೋಟಿಸ್ ಕೊಡುತ್ತಿದ್ದಂತೆ, ದೇಶದಲ್ಲೆಡ ಪ್ರತಿಭಟನೆ ನಡೆಸುವ ಕಾಂಗ್ರೆಸ್ ಎಲ್ಲ ರೀತಿಯಿಂದಲೂ ವಿಫಲರಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಅದೇ ಮಟ್ಟದ ಆಕ್ರೋಶ ವ್ಯಕ್ತಪಡಿಸುವುದಿಲ್ಲ ಏಕೆ? ಈ ರಾಜ್ಯಕ್ಕೆ ಬಿಜೆಪಿ ಪಕ್ಷ ಎಷ್ಟು ದ್ರೋಹ ಬಗೆಯುತ್ತಿದೆಯೋ ಅಷ್ಟೇ ದೊಡ್ಡ ಮಟ್ಟದ ದ್ರೋಹವನ್ನು ಕಾಂಗ್ರೆಸ್ ಸಹ ಎಸಗುತ್ತಿದೆ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ಅದು ಸಂಪೂರ್ಣವಾಗಿ ಸೋತಿದೆ ಎಂದು ಅಬ್ದುಲ್ ಮಜೀದ್ ಹೇಳಿದರು
ಈ ಹಿನ್ನೆಲೆಯಲ್ಲಿ ರಾಜ್ಯದ ಈ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡುತ್ತೇವೆ’ ಜೊತೆಗೆ ಸರ್ಕಾರದ ಮೇಲಿರುವ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತ ಎಸ್.ಡಿ.ಪಿ.ಐ ಒತ್ತಾಯ ಮಾಡುತ್ತದೆ ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮುಖ್ಯ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್, ಅಪ್ಸರ್ ಕೊಡ್ಲಿಪೇಟೆ, ದಾವಣಗೆರೆ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಝಬೀಉಲ್ಲಾ, ಜಿಲ್ಲಾ ಉಪಾಧ್ಯಕ್ಷ ರಜ್ಜಿ ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು.