ಸುದ್ದಿ360 ಚಿತ್ರದುರ್ಗ, ಆ.29: ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗೆ ಗೌರವಿಸಿ ಸಹಕಾರ ನೀಡುವುದಾಗಿ ಮುರುಘಾ ಶ್ರೀಗಳು ಹೇಳಿದ್ದಾರೆ.
ಶ್ರೀಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗಳ ಬೆನ್ನೆಲ್ಲೇ ಶ್ರೀಗಳು ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಮಠಕ್ಕೆ ಹಿಂದಿರುಗಿದ್ದಾರೆ.
ಅವರು ಹಾವೇರಿಯಿಂದ ಬಿಗಿ ಪೊಲೀಸ್ ಭದ್ರೆತೆಯಲ್ಲಿ ಮಠಕ್ಕೆ ಹಿಂತಿರುಗಿದ ನಂತರ ಮಾತನಾಡಿ, ಭಕ್ತರು ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡದೇ ಧೈರ್ಯ ಹಾಗೂ ಶಾಂತ ರೀತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.
ನಮ್ಮ ವಿರುದ್ಧ ಪಿತೂರಿ ನಡೆದಿದ್ದು, ಯಾರೂ ಆತಂಕಕ್ಕೊಳಗಾಗುವುದು ಬೇಡ. ಸಮಸ್ಯೆಯನ್ನು ಸಾಂಘಿಕವಾಗಿ, ಶಾಂತ ರೀತಿಯಿಂದ ಪರಿಹರಿಸಿಕೊಳ್ಳಲು ಎಲ್ಲರ ಸಹಕಾರ ಬೇಕಿದೆ. ಇಂತಹ ಸಮಸ್ಯೆಗಳು ಹೊಸತೇನಲ್ಲ. ಈಗ ಬಂದೊದಗಿರುವ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ವಿದ್ಯಾದಾನ, ಅನ್ನದಾನ ಮಾಡುತ್ತಾ ಚಲಿಸುವ ನ್ಯಾಯಾಲಯದ ರೀತಿಯಲ್ಲಿ ಶ್ರೀಮಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇನ್ನು ಮುಂದೆಯೂ ಹಾಗೆಯೇ ಇರಲಿದೆ. ಲಕ್ಷಾಂತರ ಭಕ್ತರು ಶ್ರೀಮಠದ ಜೊತೆಯಲ್ಲಿರುವುದು ನಮಗೆ ಸಮಾಧಾನವಿದೆ ಎಂದಿದ್ದಾರೆ.