ಸುದ್ದಿ360 ದಾವಣಗೆರೆ, ಸೆ.02: ಚಿತ್ರದುರ್ಗದ ಮುರುಘಾ ಶ್ರೀಗಳ ಬಂಧನವನ್ನು ಖಂಡಿಸಿ, ನಗರದಲ್ಲಿ ಇಂದು ವಿವಿಧ ಧರ್ಮ, ಸಮುದಾಯಗಳ ಮುಖಂಡರು, ಶ್ರೀಮಠದ ಭಕ್ತರು, ಶ್ರೀಗಳ ಬೆಂಬಲಿಗರು ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಯಾರೋ ಮಾಡಿರುವ ಷಡ್ಯಂತ್ರದಿಂದಾಗಿ ಶ್ರೀಗಳು ಗಂಭೀರ ಆರೋಪದ ಪ್ರಕರಣ ಎದುರಿಸುವಂತಾಗಿದೆ. ತಪ್ಪು ಮಾಡದೇ ಇದ್ದರೂ ಶ್ರೀಗಳನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶ್ರೀಗಳ ಬಂಧನ ಬಹಳ ಬೇಸರ ತಂದಿದೆ. ಶ್ರೀಗಳಿಗೆ ಆಗದವರು, ವಿರೋಧಿಗಳು ಮಠದ ಅಧಿಕಾರ ಪಡೆಯುವ ಆಸೆಯಿಂದ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅಧಿಕಾರಕ್ಕಾಗಿ ಶ್ರೀ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದರು.
ಶ್ರೀಗಳ ವಿರುದ್ಧದ ಈ ಷಡ್ಯಂತ್ರ ಪೂರ್ವನಿಯೋಜಿತವಾಗಿದ್ದು, ಶ್ರೀಗಳು ಅಮೆರಿಕ ಪ್ರವಾಸದಲ್ಲಿದ್ದಾಗಲೇ ಈ ಸಂಚಿನ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಗುರುಗಳ ಹೆಸರಿಗೆ ಮಸಿ ಬಳಿಯುವ ದುರುದ್ಧೇಶದಿಂದಲೇ ಈ ಕುಕೃತ್ಯ ಎಸಗಲಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಶ್ರೀಗಳು ಹಾಲಿನಷ್ಟೇ ಪರಿಶುದ್ಧರು. ಬಂಗಾರವನ್ನು ಅದು ಬಂಗಾರ ಎಂದು ಗೊತ್ತಿದ್ದರೂ ಅರೆದು, ಅರೆದು ಪರೀಕ್ಷಿಸುತ್ತಾರೆ. ಅದೇ ರೀತಿ ನಮ್ಮ ಗುರುಗಳು ಸಹ ಅಪ್ಪಟ ಬಂಗಾರದ ಗುಣ ಹೊಂದಿರುವ ಬಂಗಾರದ ಮನುಷ್ಯರು. ಈಗ ಬಂದಿರುವ ಸಂಕಷ್ಟವನ್ನು ಅವರು ಗೆದ್ದು ಬರುತ್ತಾರೆ ಎಂಬ ನಂಬಿಕೆ ನಮಗಿದೆ.
-ಬಸವಪ್ರಭು ಶ್ರೀ, ವಿರಕ್ತಮಠ, ದಾವಣಗೆರೆ.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಕೆಲವರ ಕುತಂತ್ರದಿಂದಾಗಿ ಮುರುಘಾ ಶ್ರೀಗಳು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ನಿರಪರಾಧಿಯಾಗಿ ಶೀಘ್ರವೇ ಹೊರಬರುತ್ತಾರೆ. ಆದರೆ ಇಂದು ಶ್ರೀಗಳ ವಿರುದ್ಧ ಆರೋಪ ಮಾಡಿರುವವರೇ ಮುಂದೆ ಅಪರಾಧಿಗಳ ಸ್ಥಾನದಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದರು.
ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಶ್ರೀಗಳ ಮೇಲೆ ಬಂದಿರುವ ಆಪಾದನೆಯಲ್ಲ. ಬದಲಿಗೆ ಅವರ ಶಿಷ್ಯಂದಿರಾದ ನಮ್ಮೆಲ್ಲರ ಮೇಲೆ ಬಂದಿರುವ ಆಪಾದನೆ. ಶ್ರೀಗಳು ಶೀಘ್ರವೇ ಆರೋಪ ಮುಕ್ತರಾಗುತ್ತಾರೆ. ವಿದ್ಯೆ, ಅನ್ನ ದಾಸೋಹದಂತಹ ಸಾಮಾಜಿಕ ಸೇವಾಕಾರ್ಯಗಳೇ ಅವರಿಗೆ ಜಯ ತಂದುಕೊಡಲಿವೆ ಎಂದರು. ಮುಖಂಡ ಡಾ. ನಸೀರ್ಅಹಮದ್ ಮಾತನಾಡಿ, ಶ್ರೀಗಳ ಮೇಲೆ ಪ್ರಕರಣ ದಾಖಲಿಸಿದ ಬಳಿಕ ಆರೋಪದ ಕುರಿತು ತನಿಖೆ ನಡೆಸಿ ನಂತರ ಎಫ್ಐಆರ್ ದಾಖಲಿಸಬೇಕಿತ್ತು. ಆದರೆ ದೂರು ಕೊಟ್ಟ ಕೂಡಲೆ ಯಾವುದೇ ತನಿಖೆಯಿಲ್ಲದೆ ಎಫ್ಐಆರ್ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ವಿರಕ್ತ ಮಠದ ನಿರ್ದೇಶಕ ಓಂಕಾರಪ್ಪ, ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ಎಂ. ಜಯಕುಮಾರ್, ಟಾರ್ಗೆಟ್ ಅಸ್ಲಾಂ, ಭಾಷಾ ಸಾಬ್, ಅಂದನೂರು ಮೂಪಣ್ಣ, ಬಾಲಾಜಿ, , ನಾಸೀರ್ ಅಹ್ಮದ್ ಸೇರಿದಂತೆ ಶ್ರೀಗಳ ಅನೇಕ ಅಭಿಮಾನಿಗಳು ಇದ್ದರು.