ಶಿಕ್ಷಕರ ದಿನಾಚರಣೆಯಲ್ಲಿ – ನಾಡಗೀತೆಗೆ ಅಪಮಾನ?

ದೇಶದ ಪ್ರಗತಿಗೆ ಶಿಕ್ಷಕರ ಪಾತ್ರ ಮಹತ್ವದ್ದು: ಜಿ.ಎಂ. ಸಿದ್ದೇಶ್ವರ

ಸುದ್ದಿ360 ದಾವಣಗೆರೆ, ಸೆ.05: ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಮಹತ್ವದ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಹದಡಿ ರಸ್ತೆಯ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಶಿಕ್ಷಣ ಕ್ಷೇತ್ರದ ಪ್ರಗತಿ ಕೂಡ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅಗತ್ಯವಾಗಿ ಬೇಕಾಗಿದ್ದು, ವಿದ್ಯೆ ಕಲಿಸುವ ಶಿಕ್ಷಕರೇ ಇಲ್ಲದಿದ್ದರೆ ಯಾರೂ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಮಹತ್ವದ್ದಾಗಿದೆ ಎಂದರು.

ಸರಕಾರ ಸಂಬಳ ಕೊಡುತ್ತದೆ, ಬಂದು ಪಾಠ ಮಾಡಿ ಹೋದರಾಯಿತು ಎಂಬುದಕ್ಕೆ ಶಿಕ್ಷಕರು ಸೀಮಿತರಾಗದೆ, ಮಕ್ಕಳ ಸರ್ವತೋಮುಖ ವಿಕಸನಕ್ಕೆ ಪ್ರಯತ್ನಿಸಬೇಕು. ಆ ಮೂಲಕ ಅವರನ್ನು ಸುಂದರ ಮೂರ್ತಿಯನ್ನಾಗಿಸಬೇಕು ಎಂದು ಸಂಸದರು ಸಲಹೆ ನೀಡಿದರು.

ಶಿಕ್ಷಕರು ಕೇವಲ ಬೋಧನೆ ವೃತ್ತಿಗೆ ಸೀಮಿತರಾಗದೆ, ದೊಡ್ಡ ಸಾಹಿತಿ, ವಿದ್ವಾಂಸರಾಗಿದ್ದಾರೆ. ದೇಶ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಇದಕ್ಕೆ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದಾಹರಣೆ. ಸಾಧನೆಗೆ ಹಣ ಎಂದೂ ಮುಖ್ಯವಾಗುವುದಿಲ್ಲ. ವಿದ್ಯೆ ಒಂದಿದ್ದರೆ ಏನನ್ನುಬೇಕಾದರೂ ಸಾಧಿಸಬಹುದು ಎಂಬುದನ್ನು ಎಲ್ಲ ಶಿಕ್ಷಕ ಮಹನೀಯರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.

ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಹಳ್ಳಿ ಹಳ್ಳಿಯಲ್ಲೂ ಶಾಲೆಗಳಾಗಿವೆ. ಉತ್ತಮ ಕಟ್ಟಡಗಳಿವೆ. ಮೂಲ ಸೌಲಭ್ಯಗಳಿವೆ. ಜತೆಗೆ ಬಿಸಿಊಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಸ್ಟೆಲ್ ಸೌಲಭ್ಯ ಇದೆ. ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕ, ಸಿಬ್ಬಂದಿ ಕೂಡ ಇದ್ದಾರೆ. ಹೀಗಾಗಿ ಇಂದಿನ ಶಿಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್, ಒಬ್ಬ ಶಿಕ್ಷಕ ಎಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮಾದರಿಯಾಗಿ ನಿಲ್ಲುತ್ತಾರೆ. ಒಬ್ಬ ಸಾಮಾನ್ಯ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು, ದೇಶದ ಮೊದಲ ಉಪರಾಷ್ಟ್ರಪತಿ, 2ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 1954ರಲ್ಲಿ ಭಾರತರತ್ನ ಗೌರವಕ್ಕೆ ಭಾಜನರಾದರು. ಕಷ್ಟದ ಹಾದಿ ಸವೆಸಿ ಅವರು ಮಾಡಿದ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದರು.

ದಾವಣಗೆರೆ ಶಿಕ್ಷಕರ ದಿನಾಚರಣೆ – ನಾಡಗೀತೆಗೆ ಅಪಮಾನ?

ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಮುಕ್ಕಾಲು ತಾಸು ತಡವಾಗಿ ಶುರುವಾಯಿತು. ಆಗಲೂ ಶಾಸಕ ಎಸ್‌ಎಆರ್ ಹೊರತು ಬೇರಾರೂ ಬಂದಿರಲಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡದೆಯೇ ಡಾ. ದಾದಾಪೀರ್ ನವಿಲೇಹಾಳ್ ಅವರ ಉಪನ್ಯಾಸಕ್ಕೆ ಅವಕಾಶ ನೀಡಲಾಯಿತು. ಡಾ. ದಾದಾಪೀರ್ ಅವರು ಉಪನ್ಯಾಸ ನೀಡುವಾಗಲೇ ಸಂಸದರ ಆಗಮನವಾಯಿತು. ಅವರು ವೇದಿಕೆ ಏರುತ್ತಿದ್ದಂತೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಾಡಗೀತೆ ಹಾಡಲು ಶಿಕ್ಷಕಿಯರನ್ನು ಆಹ್ವಾನಿಸಲಾಯಿತು. ಆದರೆ, ಉದ್ಘಾಟನೆ ನಂತರ ನಾಡಗೀತೆ ಹಾಡಿಸುವ ಕ್ರಮಕ್ಕೆ ಶಿಕ್ಷಕಿಯರು ಬೇಸರ ವ್ಯಕ್ತಪಡಿಸಿದರು. ಕೆಲವರು `ಇದು ನಾಡಗೀತೆಗೆ ಮಾಡುತ್ತಿರುವ ಅಪಮಾನ’ ಎಂದು ವೇದಿಕೆ ಮೇಲೇ ಆಕ್ರೋಶ ಹೊರಹಾಕಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಆರ್. ಜಯಮ್ಮ ಗೋಪಿನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಪಾಲಿಕೆ ಸದಸ್ಯೆ ಗೀತಾ ದಿಳ್ಯಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ, ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್. ತಿಪ್ಪೇಶಪ್ಪ, ಬಿಇಒಗಳಾದ ಟಿ. ಅಂಬಣ್ಣ ಹಾಗೂ ಎಂ. ನಿರಂಜನಮೂರ್ತಿ ಇದ್ದರು.

34ರಲ್ಲಿ ಬಂದವರು ಆರು !?

ಸಾಧಕ ಶಿಕ್ಷಕರನ್ನು ಅಭಿನಂದಿಸುವ ಮತ್ತು ಶಿಕ್ಷಕರ ಸೇವೆ ಸ್ಮರಿಸುವ ಕಾರ್ಯಕ್ರಮದಲ್ಲಿ ಎಸ್.ಎ. ರವೀಂದ್ರನಾಥ್ ಹೊರತುಪಡಿಸಿ ಒಬ್ಬ ಶಾಸಕರೂ ಭಾಗವಹಿಸಿರಲಿಲ್ಲ. ಇನ್ನೊಂದೆಡೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಆಹ್ವಾನ ಪತ್ರಿಕೆಯಲ್ಲಿ 34 ಗಣ್ಯರ ಹೆಸರಿದ್ದರೂ ಭಾಗವಹಿಸಿದ್ದು ಕೇವಲ ಆರು ಮಂದಿ ಮಾತ್ರ.

admin

admin

Leave a Reply

Your email address will not be published. Required fields are marked *

error: Content is protected !!