ಪ್ರತಿ ತಾಲೂಕಲ್ಲಿ ಪತ್ರಕರ್ತ ಭವನ ನಿರ್ಮಾಣ ಗುರಿ – ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿಕೆ

ಸುದ್ದಿ360 ದಾವಣಗೆರೆ: ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯ ಗುರಿ ಸಂಘಕ್ಕಿದೆ. ಸದ್ಯ 120 ಕಡೆಗಳಲ್ಲಿ ಭವನಗಳಿದ್ದು, ಉಳಿದೆಡೆಯೂ ಭವನ ಸ್ಥಾಪಿಸುವ ಉದ್ದೇಶವಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದ ವರದಿಗಾರರ ಕೂಟದಲ್ಲಿ ಭಾನುವಾರ, ಜಿಲ್ಲಾ ವರದಿಗಾರರ ಕೂಟ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂಘಟನೆ ಬಲವಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಕರೊನಾ ಅವಧಿಯಲ್ಲಿ ಮರಣ ಹೊಂದಿದ ಪತ್ರಕರ್ತರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ. ಪತ್ರಕರ್ತರಿಗೆ ನ್ಯಾಯ ಒದಗಿಸಬೇಕೆಂಬ ಹಠದಿಂದ ಈ ಕೆಲಸ ಮಾಡಲಾಗಿದೆ. ಇದು ಸಂಘದ ಹೋರಾಟದ ಒಂದು ಹಂತ ಎಂದು ತಿಳಿಸಿದರು.

ಕರೊನಾ ವೇಳೆ ರಾಜ್ಯ ಮಟ್ಟದ ಪತ್ರಿಕೆ ನಡೆಸುವುದು ಮಾಲೀಕರಿಗೆ ಕ್ಲಿಷ್ಟಕರ ಎನಿಸಿತ್ತು. ಈ ಅವಧಿಯಲ್ಲಿ ರಾಜ್ಯ ಸರ್ಕಾರದೊಟ್ಟಿಗೆ ಮಾತನಾಡಿ, ಜಾಹೀರಾತು ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿಸುವ ಮೂಲಕ ಪತ್ರಿಕೆಗಳಿಗೆ ನೆರವಾಗಿತ್ತು. ಕೋವಿಡ್ ವೇಳೆ ಹಲವಾರು ಪತ್ರಕರ್ತರನ್ನು ಕಳೆದುಕೊಂಡ ನೋವು ಈಗಲೂ ಕಾಡುತ್ತಿದೆ ಎಂದು ವಿಷಾದಿಸಿದರು.

ಕರೊನಾ ಕಾಲದಲ್ಲಿ 107ಕ್ಕೂ ಹೆಚ್ಚು ಪತ್ರಕರ್ತರು ಸಾವು ಕಂಡಿದ್ದಾರೆ. 60 ಪತ್ರಕರ್ತರ ಕುಟುಂಬಗಳಿಗೆ ನೆರವು ನೀಡಲಾಗಿದೆ. ಅಮೃತ ಮಹೋತ್ಸವ ಅಂಗವಾಗಿ ಎಲ್ಲಾ ಹಿರಿಯ ಪತ್ರಕರ್ತರ ಸನ್ಮಾನ ಮಾಡುವ ಉದ್ದೇಶದಿಂದ ಹಿರಿಯ ಪತ್ರಕರ್ತರ ಮನೆಯಂಗಳದಲ್ಲಿ ಗೌರವ ಕಾರ್ಯಕ್ರಮದ ಮೂಲಕ ಗೌರವಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ 91ನೇ ವರ್ಷ ಪೂರೈಸಿ ಶತಮಾನೋತ್ಸವದತ್ತ ದಾಪುಗಾಲಿಟ್ಟಿದೆ. 1932ರಲ್ಲಿ ಡಿ.ವಿ. ಗುಂಡಪ್ಪ ಪ್ರಾರಂಭಿಸಿದ ಸಂಘ ಈಗ ನಿಬ್ಬೆರಗಾಗುವಂತೆ ಬೆಳೆದಿದೆ. ರಾಜ್ಯದ ಉದ್ದಗಲಕ್ಕೂ ವಿಸ್ತರಿಸಿರುವ ಸಂಘ 8000 ಸದಸ್ಯರನ್ನು ಒಳಗೊಂಡಿದೆ. ಸಂಘ ಹೊರ ರಾಜ್ಯ ಮಾತ್ರವಲ್ಲ, ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿದೆ ಎಂದರು.

ಪತ್ರಕರ್ತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಆಪತ್ಬಾಂಧವ ಎಂಬ ವಾಟ್ಸಪ್ ಗ್ರೂಪ್ ರಚಿಸಿ ದೇಣಿಗೆ ಸಂಗ್ರಹಿಸಿ ಹಣವನ್ನು ನೀಡಲಾಗಿದೆ. ಸಂಕಷ್ಟದಲ್ಲಿ ಇರುವಂತಹವರಿಗೆ ಹಣ ಕಳಿಸಿ ಕೊಡಲಾಗುತ್ತಿದೆ. ಈಗಲೂ ಈ ಗ್ರೂಪ್‌ನಲ್ಲಿ ಬಂದ ಹಣವನ್ನು ಅನಾರೋಗ್ಯದಿಂದ ಬಳಲಿದ ಪತ್ರಕರ್ತರಿಗೆ ನೀಡಲಾಗುತ್ತಿದೆ ಎಂದರು.

ಸಂಘದಿಂದ ಕ್ಷೇಮಾಭಿವೃದ್ಧಿ ನಿಧಿ:

ವೆಲ್ಫೇರ್ ಫಂಡ್ ಪ್ರಾರಂಭಿಸಿದ್ದು, ಇದೀಗ 37 ಲಕ್ಷ ರೂ. ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ. ಸಂಗ್ರಹಿಸುವ ಗುರಿ ಇದೆ. ಖಂಡಿತವಾಗಿಯೂ ಆ ಗುರಿ ಮುಟ್ಟಲಾಗುವುದು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ತಾಲೂಕಿನ ಪತ್ರಕರ್ತರೊಬ್ಬರಿಗೆ ಮನೆ ಇರಲಿಲ್ಲ. ವಸತಿ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದು ಒಂದು ಮನೆ ಮಂಜೂರು ಮಾಡಿಸಲಾಗಿದೆ. ಪತ್ರಕರ್ತರ ಮನೆವರೊಬ್ಬರಿಗೆ ಕೆಲಸ ಕೊಡಿಸಲಾಗಿದೆ. ಸಾಕಷ್ಟು ಪತ್ರಕರ್ತರ ಸಂಕಷ್ಟಕ್ಕೆ ಸಂಘ ಸೂಕ್ತವಾಗಿ ಸ್ಪಂದಿಸಿದೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಪ್ಪ, ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಇತರರಿದ್ದರು. ಡಿ.ರಂಗನಾಥ್ ರಾವ್ ಸ್ವಾಗತಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!