ಸುದ್ದಿ360 ದಾವಣಗೆರೆ, ಸೆ. 06: ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾರನ್ನು ದೂಷಿಸುವುದು ಸರಿಯಲ್ಲ. ಅವರು ಇವರೆನ್ನದೆ ಎಲ್ಲರೂ ಪ್ರಾಕೃತಿಕ ವಿಕೋಪಕ್ಕೆ ಕಾರಣರಾಗಿದ್ದಾರೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಆಗಿರುವ ಮಳೆ ಅವಘಡಕ್ಕೆ ಯಾವುದೇ ಪಕ್ಷವನ್ನು ದೂಷಿಸುವಂತಹದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸರಿಯಾದ ರೀತಿಯಲ್ಲಿ ಕಾಲುವೆ ವ್ಯವಸ್ಥೆಯನ್ನು ಮಾಡಿರದೇ ಇರುವುದು. ಟೌನ್ ಪ್ಲಾನಿಂಗ್ ಸಂದರ್ಭದಲ್ಲಿ ಬೇಕಾಬಿಟ್ಟಿ ಒಪ್ಪಿಗೆ ಕೊಟ್ಟಿರುವುದು ಸೇರಿದಂತೆ. ಬೆಂಗಳೂರು ಸಂಪೂರ್ಣ ಕಾಂಕ್ರೀಟ್ ಮಯವಾಗಿದ್ದು, ಅಲ್ಲಿ ಬಿದ್ದಂತಹ ನೀರು ಭೂಮಿಯಲ್ಲಿ ಇಂಗಿಕೊಳ್ಳದೆ ರಸ್ತೆಮೇಲೆಲ್ಲಾ ಹರಿಯುತ್ತದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯವನ್ನು ನಮ್ಮ ಸರ್ಕಾರ ಮಾಡ್ತಾ ಇದೆ ಎಂದು ಅವರು ಹೇಳಿದರು.
ನಾವ್ಯಾರೂ ಸುಮ್ಮನೆ ಕೂತಿಲ್ಲ. ಕೆಲಸ ಮಾಡುತ್ತಲೇ ಇದ್ದೇವೆ. ಇಂತಹ ಅಕಾಲಿಕ ಮಳೆಯಿಂದ ಯಾವ ಸರ್ಕಾರವಾದರೂ ಏನು ಮಾಡಲು ಸಾಧ್ಯ. ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿ ಎನ್ನುವ ರೀತಿಯಲ್ಲಿ ಕೆಲವರು ಮಾತಾಡುತ್ತಾರೆ ಎಂದು ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕೆರೆಗಳ ಒತ್ತುವರಿಯಾಗುವುದಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ರಾಜಕಾರಣಿಗಳೇ ಹೊಣೆ. ಇಂತಹ ಪಕ್ಷದವರೇ ಎಂದು ಹೇಳಲಾಗುವುದಿಲ್ಲ. ಇದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಬಿ.ಸಿ. ಪಾಟೀಲ್ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.