ಸುದ್ದಿ360 ದಾವಣಗೆರೆ, ಸೆ.07: ಯಾವುದೇ ದಾಖಲೆ ಹೊಂದಿರದೇ ಆರ್ಟಿಒ ದಿಂದ ಪರವಾನಿಗೆ ಪಡೆಯದೇ ದಾವಣಗೆರೆಯಿಂದ ಪಂಜಾಬ್ಗೆ ಅಕ್ರಮವಾಗಿ ಟ್ರಾಕ್ಟರ್ ಬಿಡಿ ಭಾಗಗಳನ್ನು ಮಾರಾಟವಾಗುತ್ತಿದ್ದುದನ್ನು ಜಿಲ್ಲಾ ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್ಬಿ ಘಟಕದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ. ಎಸ್. ಬಸವರಾಜ್ ಮತ್ತು ಅಧಿಕಾರಿ, ಸಿಬ್ಬಂದಿಗಳು ದಾವಣಗೆರೆ ನಗರದ ರೈತರ ಸಂಘದ ಕಾಂಪೌಂಡ್, ಬಿಲಾಲ್ ಕಾಂಪೌಂಡ್ ಬಳಿ ಇರುವ ಗ್ಯಾರೇಜುಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಹಳೇಯ ಟ್ರಾಕ್ಟರ್ಗಳನ್ನು ಪೈನಾನ್ಸ್, ಶೋರೂಂ ಮತ್ತು ರೈತರಿಂದ ಗ್ಯಾರೇಜ್ ಮಾಲೀಕರು ಖರೀದಿ ಮಾಡಿ ಅವುಗಳನ್ನು ಯಾವುದೇ ಮೂಲ ದಾಖಲಾತಿ ಪಡೆಯದೇ ಮತ್ತು ಸಾರಿಗೆ ಇಲಾಖೆಯಿಂದ ಸ್ಕ್ರ್ಯಾಪ್ ಲೆಟರ್ ಪಡೆಯದೇ ಟ್ರಾಕ್ಟರ್ಗಳನ್ನು ಬಿಚ್ಚಿ ಪಂಜಾಬ್ ರಾಜ್ಯದ ಗುಜರಿ ಮಾಲೀಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಯಾವುದೇ ಗುಜರಿ ಅಂಗಡಿ ಮಾಲೀಕರು ನಿಯಮ ಬಾಹಿರವಾಗಿ ಟ್ರಾಕ್ಟರ್ಗಳನ್ನು ಖರೀದಿ ಮಾಡಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯದೇ ಈ ರೀತಿ ಮಾರಾಟ ಮಾಡುವುದು ಅಕ್ರಮ ಹಾಗೂ ಕಾನೂನು ಬಾಹಿರವಾಗಿದ್ದರಿಂದ ಅವುಗಳನ್ನು ತಡೆದು ಆರ್ಟಿಒ ಅಧಿಕಾರಿ ಹಾಗೂ ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ.
ಆರ್ಟಿಒ ಪರವಾನಿಗೆ ಮತ್ತು ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಎನ್ಒಸಿ ಪಡೆಯದೇ ಬೇರೆ ರಾಜ್ಯಗಳಿಗೆ ಅಥವಾ ಗುಜರಿಗೆ ನೀಡುವುದು ಕಾನೂನು ಬಾಹಿರವಾಗಿದ್ದು ಈ ರೀತಿ ಮಾಡಬಾರದೆಂದು’ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಬಿ.ರಿಷ್ಯಂತ್ ಐಪಿಎಸ್ ರವರು ಪೊಲೀಸ್ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಸೂಚಿಸಿದ್ದಾರೆ.