ನಾರಾಯಣ ಗುರುವಿಗೆ ಸಿಎಂ ಅಪಮಾನ – ಶೀಘ್ರದಲ್ಲೇ ಬೆಂಗಳೂರು ಪಾದಯಾತ್ರೆ

ಸುದ್ದಿ360 ದಾವಣಗೆರೆ, ಸೆ.11: ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸರಕಾರದಿಂದ ನಿರಂತರವಾಗಿ ಅಪಮಾನ ಆಗುತ್ತಿದೆ. ಇದನ್ನು ಖಂಡಿಸಿ, ಮುಂದಿನ 10 ದಿನಗಳ ಒಳಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಚಿಂತನೆ ಇದೆ ಎಂದು ಚಿತ್ತಾಪುರ ತಾಲೂಕು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಬೇಕಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುಗಳಿಗೆ ಹಾಗೂ ಈಡಿಗ ಬಿಲ್ಲವ ನಾಮಧಾರಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಪದೇ ಪದೆ ಗುರುಗಳನ್ನು ಸರಕಾರಗಳು ಅವಮಾನಿಸುತ್ತಲೇ ಬರುತ್ತಿದ್ದರೂ ಸಹ ರಾಜ್ಯದಲ್ಲಿರುವ ಈಡಿಗ ಬಿಲ್ಲವ ನಮಧಾರಿ ಸಮುದಾಯದ ಏಳು ಶಾಸಕರು ಹಾಗೂ ಇಬ್ಬರು ಸಚಿವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೀಗಾಗಿ ಗುರುಗಳಿಗೆ ಇಂದು ಆಗುತ್ತಿರುವ ಎಲ್ಲ ಅಪಮಾನಗಳಿಗೆ ಸಮುದಾಯದ ಜನಪ್ರತಿನಿಧಿಗಳೇ ನೇರವಾಗಿ ಕಾರಣರು. ಇವುಗಳೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಮಂಗಳೂರಿನಲ್ಲಿ ಸಮುದಾಯದ ಎಲ್ಲ ಮುಖಂಡರ ಸಭೆ ಕರೆಯಲಾಗುವುದು. ಸರಕಾರದ ವಿರುದ್ಧದ ಮುಂದಿನ ಹೋರಾಟ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.

ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ

ಮುಖ್ಯಮಂತ್ರಿಗಳು ನಾರಾಯಣ ಗುರುಗಳ ಜಯಂತಿಯಂದು ಶ್ರೀಗಳಿಗೆ ಪೂಜೆ ಸಲ್ಲಿಸಿಲ್ಲ. ಅಲ್ಲದೆ, ಅವರ ಪಕ್ಷದ ಕಾರ್ಯಕ್ರಮದಲ್ಲಿ ನಾಯಕರ ಭಾವಚಿತ್ರಗಳ ಜತೆ, ಸಮಾನತೆ ಹರಿಕಾರ ನಾರಾಯಣ ಗುರುಗಳ ಭಾವಚಿತ್ರ ಇರಿಸುವ ಮೂಲಕ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ಅವರು ದೂರಿದರು.

ಸರಕಾರ ಹಾಗೂ ಸಚಿವರ ವರ್ತನೆ ಖಂಡಿಸಿ ಮುಂದಿನ 10 ದಿನಗಳ ಒಳಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಚಿಂತನೆ ಇದೆ ಎಂದು ಸ್ವಾಮೀಜಿ ಹೇಳಿದರು.

ರಾಜಕೀಯ ಗಿಮಿಕ್

ಮಂಗಳೂರಿನಲ್ಲಿ ಸಚಿವ ಸುನೀಲ್‌ಕುಮಾರ್ ನೇತೃತ್ವದಲ್ಲಿ ನಡೆದ ಸಮಾರಂಭ, ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಆಯೋಜಿಸಿದ್ದ ರಾಜಕೀಯ ಗಿಮಿಕ್ ಸಮಾರಂಭವಾಗಿತ್ತು. ಪಠ್ಯದಿಂದ ನಾರಾಯಣ ಗುರುಗಳ ಪಾಠ ತೆಗೆದ ಸಮಿತಿಯ ಪ್ರಮುಖ ರೋಹಿತ್ ಚಕ್ರತೀರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಕೂಡ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ತಪ್ಪಿಗಾಗಿ ಬಿಜೆಪಿ ಹಾಗೂ ಸಮುದಾಯದ ಸಚಿವರು, ಜನಪ್ರತಿನಿಗಳು ಮುಂದಿನ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಶ‍್ರೀಗಳು ಎಚ್ಚರಿಕೆ ನೀಡಿದರು.

ಈ ಹಿಂದೆ ಕೇಂದ್ರ ಸರಕಾರ ಗಣರಾಜ್ಯೋತ್ಸವ ಮೆರವಣಿಗೆಗೆ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಿತ್ತು. ಬಳಿಕ ರಾಜ್ಯದಲ್ಲಿ ಗುರುಗಳ ಪಾಠವನ್ನು ಪಠ್ಯಪುಸ್ತಕದಿಂದ ತೆಗೆಯಲಾಯಿತು. ಸರಕಾರದ ವಿರುದ್ಧ ಹೋರಾಟ ಮಾಡುವ ಅಥವಾ ದನಿ ಎತ್ತುವ ಮಠಾಧೀಶರ ವಿರುದ್ಧ ಷಡ್ಯಂತ್ರ ರೂಪಿಸುವ ಕೆಲಸ ನಡೆಯುತ್ತಿದೆ. ಅದನ್ನು ಸರಕಾರವೇ ಮಾಡುತ್ತಿದೆ ಎಂಬುದು ನಮ್ಮ ಆರೋಪವಲ್ಲ. ಆದರೆ ಸರಕಾರಕ್ಕೆ ಬೇಕಾದವರು ಯಾರೋ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಜಿಲ್ಲಾಧ್ಯಕ್ಷ ಎಚ್.ವೈ. ಆನಂದ್, ರಾಜ್ಯ ಕಾರ್ಯದರ್ಶಿ ಆರ್. ಪ್ರತಾಪ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದ ಜ್ಞಾನದೇವ ಮತ್ತು ಬಾಲರಾಜ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!