ಸುದ್ದಿ360, ದಾವಣಗೆರೆ ಸೆ.12: ಭಾರತದ ಸನಾತನ ಹಿಂದೂ ಧರ್ಮ ಪರಂಪರೆಯಲ್ಲಿ ಪರಿಪೂರ್ಣ ಸನ್ಯಾಸ ಎಂಬುದು ಎಂದಿಗೂ ಇಲ್ಲವೇ ಇಲ್ಲ. ಸ್ವಾಮೀಜಿಗಳು ವಿವಾಹವಾಗಿ, ಸಂಸಾರದೊಂದಿಗೆ ಮಠ ನಡೆಸಿಕೊಂಡು ಹೋಗುವುದು ಸೂಕ್ತ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಶ್ರೀಗಳು, ಈ ಹಿಂದೆ ವಿಶ್ವಗುರು ಬಸವಣ್ಣನವರ ಆದಿಯಾಗಿ ಬಹುತೇಕ ಗುರುಗಳು ಸಂಸಾರಿಗಳಾಗಿದ್ದರು. ಶಂಕರಾಚಾರ್ಯರು ಒಬ್ಬ ರಾಜನೊಳಗೆ ಪರಕಾಯ ಪ್ರವೇಶ ಮಾಡಿ ಗೃಹಸ್ಥಾಶ್ರಮದ ಅನುಭವ ಪಡೆದ ನಂತರ ಸರ್ವಜ್ಞ ಪೀಠವನ್ನು ಏರಿದ್ದರು. ನಾನು ಕೂಡ ಪದ್ಧತಿ ಪ್ರಕಾರ ವಿವಾಹವಾಗಿ ಬಳಿಕ ಮಠಾಧೀಶನಾಗಿದ್ದೇನೆ. ನನಗೆ ಲೈಸೆನ್ಸ್ ಇದೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ ಅವರು, ಹೀಗೆ ಮಾಡಿದರೆ ಇತ್ತೀಚೆಗೆ ಮಠಾಧೀಶರ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ತೆರೆ ಎಳೆಯಬಹುದು ಎಂದರು.
ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಲ್ಲವನ್ನೂ ನಿಯಂತ್ರಣದಲ್ಲಿ ಇರಿಸಿಕೊಂಡು, ಅವುಗಳನ್ನು ಗೆದ್ದು ತೋರಿಸಿರುವ ಗುರುಗಳೂ ಇಂದು ನಮ್ಮ ನಡುವೆ ಸಮಾಜದಲ್ಲಿದ್ದಾರೆ. ಆದರೆ ಇಂತಹ ಸನ್ಯಾಸಕ್ಕೆ ಗಟ್ಟಿಯಾದ ನಿರ್ಧಾರ ಅಗತ್ಯವಾಗಿದೆ. ಈಗಿನ ಕಾಲಘಟ್ಟದಲ್ಲಿ ಅದು ಕಷ್ಟಸಾಧ್ಯ. ಸ್ವಾಮೀಜಿಗಳ ಮೇಲಿನ ಆರೋಪಗಳು ಸತ್ಯವೋ, ಸುಳ್ಳೋ ಎಂಬುದನ್ನು ಕಾನೂನು ನಿರ್ಧರಿಸುತ್ತದೆ. ಇಂದಿನ ವಾತಾವರಣದಲ್ಲಿ ಸ್ವಾಮೀಜಿಗಳು ಋಷಿ ಪರಂಪರೆಯನ್ನು ಅಳವಡಿಸಿಕೊಂಡರೆ ಸನಾತನ ಧರ್ಮ ಉಳಿಯುತ್ತದೆ. ನವ ದ್ವಾರಗಳ ಆಧಾರದಲ್ಲಿ ರೂಪಿತವಾಗಿರುವ ನಮ್ಮ ಶರೀರದಲ್ಲಿ ಪ್ರಕೃತಿ ಸಹಜ ಪ್ರಕ್ರಿಯೆಗಳು ನಡೆಯಲೇಬೇಕು ಎಂದು ಹೇಳಿದ ಸ್ವಾಮೀಜಿ, ಕೈಯಲ್ಲಿ 2 ಲಕ್ಷ ರೂ. ಮೌಲ್ಯದ ಮೊಬೈಲ್ ಹಿಡಿದುಕೊಂಡು ನಾನೊಬ್ಬ ಪೂರ್ಣ ಸನ್ಯಾಸಿ, ಬ್ರಹ್ಮಚಾರಿ ಎಂದು ಹೇಳಿದರೆ ಸಮಾಜ ಒಪ್ಪುವುದಿಲ್ಲ. ಹೀಗಾಗಿ ನಾವು ವಾಸ್ತವದಲ್ಲಿ ನಿಂತು ಯೋಚನೆ ಮಾಡಬೇಕು. ಮದುವೆ ಆಗಬೇಡಿ ಎಂದು ಯಾವ ಭಕ್ತರೂ ಹೇಳುವುದಿಲ್ಲ. ಹೀಗಾಗಿ ಸ್ವಾಮೀಜಿಗಳು ಮದುವೆಯಾಗಿ, ಆರಾಮಾಗಿ ಮಠ ನಡೆಸಿದರೆ ಯಾವ ತೊಂದರೆಯೂ ಇರುವುದಿಲ್ಲ.
– ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ
ಭಕ್ತರೇ ಸ್ವಾಮೀಜಿಗಳ ಮನವೊಲಿಸಲಿ
ಮಠಾಧೀಶರು ಮದುವೆಯಾಗುವುದು ಸೂಕ್ತ. ಮದುವೆಯಾಗದೆ ಹಾಗೆಯೇ ಉಳಿದು, ಅತ್ತ ಸಂಸಾರವೂ ಇಲ್ಲದೆ, ಮತ್ತೊಂದೆಡೆ ಸನ್ಯಾಸವನ್ನೂ ಸರಿಯಾಗಿ ಪಾಲನೆ ಮಾಡಲಾಗದೆ ಸಮಾಜದಲ್ಲಿ ಅಪಮಾನ, ಅಪವಾದಗಳನ್ನು ಎದುರಿಸಬೇಕಾಗುತ್ತದೆ. ಇದು ಕಲಿಯುಗವಾಗಿರುವ ಕಾರಣ ಆಯಾ ಮಠದ ಭಕ್ತರು ತಮ್ಮ ಸ್ವಾಮೀಜಿಗಳ ಮನವೊಲಿಸಿ ಸಾಂಸಾರಿಕ ಜೀವನ ಹೊಂದುವಂತೆ ಮಾಡಬೇಕು. ಆಗ ಮಾತ್ರ ಸನಾತನ ಧರ್ಮ ಉಳಿಯುತ್ತದೆ. ಇಲ್ಲದಿದ್ದರೆ ವಿನಾಕಾರಣ ಆರೋಪ, ಅಪವಾದಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಎಲ್ಲೋ ಒಂದುಕಡೆ ಧರ್ಮಕ್ಕೆ ಅಪಚಾರವಾಗುತ್ತದೆ ಎಂದರು.