ಸುದ್ದಿ360, ದಾವಣಗೆರೆ: ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ ನಿಜ ಆದರೆ ಇಲ್ಲಿ ಚಿಮ್ಮುವ ನೀರಿಗೆ ಯಾರ ಅಪ್ಪಣೆಯಾದರೂ ಇರಬೇಕಲ್ಲವಾ. . . .? ಅಪ್ಪಣೆ ಇರದಿದ್ದರೂ ಬೇಜಾವಾಬ್ದಾರಿ ಅಂತೂ ಇದ್ದೇ ಇದೆ ಎಂಬುದು ನಾಗರೀಕರು ಮಾತಾಡಿಕೊಳ್ಳುವ ಕಟು ಸತ್ಯ.
ಈ ಮೂಲಕ ಇಲ್ಲಿ ವರದಿ ಮಾಡಲು ಹೊರಟಿರುವ ವಿಷಯ ಏನು ಅಂತೀರಾ. . . ನಗರದ ದೇವರಾಜು ಅರಸು ಬಡಾವಣೆ ಎ ಬ್ಲಾಕ್. ಇದು ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆಯ ಪಕ್ಕದ ಸರ್ವಿಸ್ ರಸ್ತೆಯಾಗಿದ್ದು, ಎಸ್ ಪಿ ಕಛೇರಿಯ ಕಾಂಪೌಂಡ್ಗೆ ಹೊಂದಿಕೊಂಡಂತಿರುವ ರಸ್ತೆಯ ಬದಿಯಲ್ಲಿರುವ ಕುಡಿಯುವ ನೀರು ಸರಬರಾಜಿನ ಪೈಪ್ ಲೈನ್ ಪುಟ್ ವಾಲ್ ನಿಂದ ಎಗ್ಗಿಲ್ಲದೆ ತಿಂಗಳಿಗೂ ಹೆಚ್ಚು ಸಮಯದಿಂದ ನೀರು ಚಿಮ್ಮುತ್ತಲೇ ಇದೆ. ಇದಕ್ಕೆ ಯಾರ ಅಪ್ಪಣೆಯೂ ಇದ್ದಂತಿಲ್ಲ. ಆದರೆ ಇದನ್ನು ಲಕ್ಷಿಸದ ಮಹಾನಗರ ಪಾಲಿಕೆ ಸಿಬ್ಬಂದಿಯ ಬೇಜಾವಾಬ್ದಾರಿ ಮಾತ್ರ ಎದ್ದು ಕಾಣುತ್ತಿದೆ.
ಇನ್ನೇನು ಜಲಸಿರಿ ಯೋಜನೆಯ ಪೈಪ್ ಲೈನ್ ಗಳು ಚಾಲನೆಗೆ ಬರುತ್ತವೆ ಎಂದು ಇದನ್ನು ನಿರ್ಲಕ್ಷಿಸಿಯೂ ಇರಬಹುದು. ಆದರೆ ಆ ಲೈನ್ ಇನ್ನೂ ಚಾಲನೆಗೊಂಡು ಪರೀಕ್ಷೆಗೊಳಪಡಿಸಿ ಜನರ ಬಳಕೆಗೆ ಲಭ್ಯವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಇಲ್ಲಿ ಪೋಲಾಗುವ ನೀರು, ಪಂಪ್ ಆಗಲು ತಗಲುವ ವಿದ್ಯುತ್ ಶಕ್ತಿ ಇವು ಸುಖಾಸುಮ್ಮನೆ ಪೋಲಾಗುವುದರ ಜೊತೆಗೆ ಆ ಪ್ರದೇಶದ ನೈರ್ಮಲ್ಯಕ್ಕೆ ಕಾರಣವಾಗುತ್ತದೆ.
ಇಲ್ಲಿ ಹೀಗೆ ಪೋಲಾಗುವ ನೀರು ರಸ್ತೆಯ ಮೇಲೂ ಹರಿಯುತ್ತದೆ ಅಲ್ಲದೆ, ಆ ಪ್ರದೇಶದ ಸುತ್ತಮುತ್ತ ಹರಿದು ಯಾವಾಗಲೂ ನೀರು ನಿಂತು ಕೊಳ್ಳುತ್ತದೆ. ಅಷ್ಟೇ ಅಲ್ಲ. ಹಂದಿಗಳ ಜಲಕ್ರೀಡೆಗೂ ಇದು ಸಾಕ್ಷಿಯಾಗಿದೆ. ಸಂಬಂಧಪಟ್ಟವರು ಕೂಡಲೇ ನೀರು ಪೋಲಾಗುವುದನ್ನು ತಡೆದು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಲಿ ಎಂಬುದು ಸುದ್ದಿ360 ತಾಣದ ಆಶಯ.