ಸುದ್ದಿ360 ದಾವಣಗೆರೆ, ಸೆ.17: ಕುಂದುವಾಡ ಲೇಔಟ್‌ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ ಹಣ ನೀಡುವುದಾಗಿ ಹೇಳಿದ್ದ ದೂಡಾ ಮೂರು ವರ್ಷಗಳಿಂದ ರೈತರಿಗೆ ಮೆಘಾ ಧಾರಾವಾಹಿ ತೋರಿಸುತ್ತಿದೆ. ಇದರಿಂದ ನಾವು ರೋಸಿ ಹೋಗಿದ್ದೇವೆ. ಇನ್ನು ಎಕರೆಗೆ 5 ಕೋಟಿ ರೂ. ಕೊಡುತ್ತೇವೆ ಎಂದರೂ ನಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹಳೇಕುಂದುವಾಡ ರೈತರು ಹೇಳಿದ್ದಾರೆ.
ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ರೈತ ಎನ್. ಮಲ್ಲಿಕಾರ್ಜುನ್, ಭೂಮಿ ಖರೀದಿಸುವುದಾಗಿ ಇಷ್ಟು ದಿನಗಳ ಕಾಲ ಸತಾಯಿಸಿರುವ ದೂಡಾಗೆ ಅಥವಾ ಸರಕಾರಕ್ಕೆ ಭೂಮಿ ನೀಡದೆ ಇರಲು ನಿರ್ಧರಿಸಿದ್ದೇವೆ. ಹಿಂದೆ 1.18 ಕೋಟಿ ರೂ. ನಿಗದಿ ಮಾಡಿದಾಗ ಜಿಲ್ಲೆಯ ಬೇರೆ ಭಾಗದಲ್ಲಿ 25 ಲಕ್ಷ ರೂ.ಗೆ ಎಕರೆ ಭೂಮಿ ಸಿಗುತ್ತಿತ್ತು. ಇಲ್ಲಿ ಒಂದು ಎಕರೆ ಲೇಔಟ್‌ಗೆ ನೀಡಿ ಬೇರೆಡೆ ನಾಲ್ಕು ಎಕರೆ ಭೂಮಿ ಖರೀದಿಸುವ ಯೋಜನೆ ಬಹುತೇಕ ರೈತರದ್ದಾಗಿತ್ತು. ಆದರೆ, ಈಗ ನಗರದಿಂದ 35 ಕಿ.ಮೀ ದೂರ ಹೋದರೂ 50 ಲಕ್ಷ ರೂ.ಗಿಂತ ಕಡಿಮೆಗೆ ಒಂದು ಎಕರೆ ಹೊಲ ಸಿಗುತ್ತಿಲ್ಲ. ಹೀಗಾಗಿ ಇರುವ ಜಮೀನು ಕೊಟ್ಟರೆ ಜೀವನ ನಡೆಸಲು ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಜಮೀನು ನೀಡದಿರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಎಲ್ಲದಕ್ಕೂ ನಮ್ಮೂರೇ ಯಾಕೆ?
ಈ ಹಿಂದೆ ಕೆಎಚ್‌ಬಿ ಕಾಲನಿಗೆ 360 ಎಕರೆ ಭೂಮಿ ನೀಡಿದ್ದೇವೆ. ಕುಂದವಾಡ ಕೆರೆಗೆ 100 ಎಕರೆ ನೀಡಿದ್ದೇವೆ. ಈಗ ದೂಡ ಲೇಔಟ್‌ಗೂ ನಮ್ಮ ಊರಿನ ಜಮೀನೇ ಬೇಕಾ? ದಾವಣಗೆರೆಗೆ ಹೊಂದಿಕೊಂಡಂತೆ ಶಾಮನೂರು, ನಾಗನೂರು, ಶಿರಮಗೊಂಡನಹಳ್ಳಿ, ಬಾತಿ, ಕಕ್ಕರಗೊಳ್ಳ ಸೇರಿ ಹಲವು ಗ್ರಾಮಗಳಿವೆ. ಆದರೆ ಪ್ರತಿ ಬಾರಿ ಕುಂದುವಾಡದ ಕೃಷಿ ಭೂಮಿಯೇ ಬೇಕು ಎನ್ನವುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಸರಕಾರ ತಿಳಿಸಬೇಕು ಎಂದು ಗ್ರಾಮಸ್ಥರು ಕಿಡಿಕಾರಿದರು.
ಲೇಔಟ್‌ಗೆ 53.19 ಎಕರೆ ಭೂಮಿ ಗುರುತಿಸಲಾಗಿದೆ. ಆ ಪೈಕಿ 48 ಎಕರೆಯ 42 ಮಂದಿ ರೈತರ ಗುಂಪು ಜಮೀನು ನೀಡದಿರಲು ನಿರ್ಧರಿಸಿದೆ. ಅಲ್ಲದೆ ಸೆ.5ರಂದು ಯೋಜನೆಗೆ 32 ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮತ್ತೆ ಲೇಔಟ್ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಸರಕಾರ ಹೆಚ್ಚು ಬೆಲೆ ನೀಡಲಿ ಎಂಬ ದುರುದ್ದೇಶ ನಮ್ಮದಲ್ಲ. ನಾವೂ ಕಾದು ಬೇಸತ್ತಿದ್ದೇವೆ. ಜತೆಗೆ ಹೊರಗೆ ಕಡಿಮೆ ಬೆಲೆಗೆ ಭೂಮಿ ಸಿಗುತ್ತಿಲ್ಲ. ಹೀಗಾಗಿ ಪ್ರಾಧಿಕಾರ ಎಷ್ಟೇ ಕೋಟಿ ಕೊಟ್ಟರೂ ನಾವು ಭೂಮಿ ನೀಡುವುದಿಲ್ಲ. ಒಂದೊಮ್ಮೆ ಬಲವಂತದಿಂದ ಭೂಮಿ ವಶಕ್ಕೆ ಪಡೆಯಲು ಮುಂದಾದರೆ, ಹೆಂಡತಿ, ಮಕ್ಕಳು ಸೇರಿ ಕುಟುಂಬ ಸದಸ್ಯರೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
3 ವರ್ಷದ ಹಿಂದೆ ಎಕರೆಗೆ 1.18 ಕೋಟಿ ರೂ. ನಿಗದಿ ಮಾಡಿದ್ದ ದೂಡಾ, ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ, ಹಣ ನೀಡುವುದಾಗಿ ಹೇಳಿತ್ತು. ಆದರೆ ಎರಡು ವರ್ಷ ಕಳೆದರೂ ಯೋಜನೆ ಟೇಕಾಫ್ ಆಗಲಿಲ್ಲ. ಕಾದು ಬೇಸತ್ತ ರೈತರು, ಇದೇ ವರ್ಷ ಮಾರ್ಚ್ನಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಾಗ, ಎಕರೆಗೆ 1.28 ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು. ಮೇ 31ರ ಒಳಗಾಗಿ ಲೇಔಟ್ ಪ್ರಕ್ರಿಯೆ ಆರಂಭಿಸುವುದಾಗಿ ದೂಡ ಆಯುಕ್ತರು ಭರವಸೆ ನೀಡಿದ್ದರು. ಗಡುವು ಮೀರಿದರೆ ಭೂಮಿ ನೀಡುವುದಿಲ್ಲ ಎಂದು ರೈತರು ಈ ವೇಳೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಆಯುಕ್ತರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತರಾದ ಎಚ್. ಸೋಮಶೇಖರ್, ಶಿವಣ್ಣ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮಹಾಂತೇಶ್, ಮಂಜುನಾಥ್ ಇತರರು ಇದ್ದರು.